ಸುಳ್ಯ: ಮೆಸ್ಕಾಂ ಆಪರೇಟರ್ ಮೇಲೆ ಮೇಲಾಧಿಕಾರಿಯಿಂದ ಹಲ್ಲೆ ಪ್ರಕರಣ|ಎಫ್ ಐ ಆರ್ ದಾಖಲಿಸಲು ಭಯಗೊಂಡ ಸಿಬ್ಬಂದಿ| ಮೊಬೈಲ್ ಹಾನಿಗೊಳಿಸಿದ್ದಕ್ಕೆ ರೂ.10 ಸಾವಿರ ನೀಡಿದ ಸುಪ್ರೀತ್| ಮೇಲಾಧಿಕಾರಿಗಳಿಗೆ ದೂರು

ಸಮಗ್ರ ನ್ಯೂಸ್: ಸುಳ್ಯದ ಮೆಸ್ಕಾಂ ಸಬ್ ಸ್ಟೇಷನ್ ನಲ್ಲಿ ಜಂಪರ್ ಕೊಡಲು ಲೈನ್ ಮ್ಯಾನ್ ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಎಇ ಸುಪ್ರೀತ್ ಅವರು ಲೈನ್ ಆಪ್ ಮಾಡಿಕೊಟ್ಟ ಸ್ಟೇಷನ್ ಆಪರೇಟರ್ ಗೆ ಹಲ್ಲೆ ನಡೆಸಿದ ಘಟನೆ ಆ. 2 ರಂದು ನಡೆದಿದ್ದು ಸುಳ್ಯ ಠಾಣೆ ಹಾಗೂ ಮೆಸ್ಕಾಂ ಮೇಲಾಧಿಕಾರಿಗಳಿಗೆ ದೂರು ಹೋದ ಬಗ್ಗೆ ವರದಿಯಾಗಿದೆ.

ಆ.02 ರಂದು ಕಲ್ಲುಗುಂಡಿ ಫೀಡರ್ ನ ಜಂಪರ್ ಕಟ್ ಆಗಿದ್ದು ದುರಸ್ತಿಗಾಗಿ ಲೈನ್ ಮ್ಯಾನ್ ಮಣಿಕಂಠ ಸಬ್ ಸ್ಟೇಷನ್ ಗೆ ಬಂದಿದ್ದು, ಕೆಲಸ ಮಾಡಲು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಅವರಿಗೆ ಕಲ್ಲುಗುಂಡಿ ಮತ್ತು ಇತರ ಫೀಡರ್ ಗಳನ್ನು ಲೈನ್ ಕ್ಲಿಯರೆನ್ಸ್ ( LC) ಮಾಡಿದ್ದರು. ನಂತರ ಮಣಿಕಂಠ ಅವರು ಕೆಲಸ ನಿರ್ವಹಿಸಿದ್ದರು.

ಮಧ್ಯಾಹ್ನ ವೇಳೆಗೆ ಕಛೇರಿಗೆ ಹೋದ ಎಇ ಸುಪ್ರೀತ್ ಅವರು ಎಲ್ ಸಿ ನೀಡಿದ ವಿಚಾರವಾಗಿ ಕೆಲಸ ಮಾಡಲು ವಿಳಂಬ ಮಾಡಿದ್ದಾರೆ, ಆಪರೇಟರ್ ರಾಘವ ಅವರು ಸಮರ್ಪಕ ಮಾಹಿತಿ ನೀಡಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು, ಮೊಬೈಲ್ ಒಡೆದು ಹಾಕಿ ತೆಗೆದುಕೊಂಡು ಹೋಗಿದ್ದಲ್ಲದೇ ದೈಹಿಕ ಹಲ್ಲೆ ನಡೆಸಿದರೆನ್ನಲಾಗಿದೆ.

ಎ.ಇ. ಸುಪ್ರೀತ್ ರು ಹಲ್ಲೆ ನಡೆಸಿದ ಪರಿಣಾಮ ರಾಘವರ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ಬಳಿಕ ಪೋಲೀಸ್‌ ಠಾಣೆಗೆ ಹೋಗಿ ಇಂಜಿನಿಯರ್ ಸುಪ್ರೀತ್ ವಿರುದ್ಧ ದೂರು ನೀಡಿದರು.

ದೂರಿನ ಮೇರೆಗೆ ಎಇ ಸುಪ್ರೀತ್ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ಆರೋಪ ನಿರಾಕರಿಸಿ, ಸಾಕ್ಷಿ ಇದ್ದರೇ ತನ್ನಿ ಎಂದರೆನ್ನಲಾಗಿದೆ. ಕಛೇರಿಯಲ್ಲಿ ಸಿಸಿ ಟಿವಿ ಇಲ್ಲದೇ ಇರುವುದರಿಂದ ಸಾಕ್ಷಿ ಕೊರತೆ ಇರುವುದರಿಂದ ಕೇಸು ಖುಲಾಸೆಗೊಂಡರೇ ಎಇ ಯವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ ಎಂಬ ಭಯದಿಂದ ಎಫ್ ಐ ಆರ್ ದಾಖಲಿಸಲು ಹಿಂಜರಿದರೆನ್ನಲಾಗಿದೆ.

ಮೊಬೈಲ್ ನಲ್ಲಿ ಅಮೂಲ್ಯ ದಾಖಲೆಯ ಪೈಲ್ ಗಳಿವೆ ಅದು ಬೇಕು ಎಂದು ಪೋಲೀಸರ ಬಳಿ ಸಿಬ್ಬಂದಿ ಒತ್ತಾಯಿಸಿದ್ದರಿಂದ ‌ಮೊಬೈಲ್ ಹಾನಿಯಾಗಿರುವುದಕ್ಕೆ 10 ಸಾವಿರ ರೂ ಹಾಗೂ ಹುಡಿಯಾದ ಮೊಬೈಲನ್ನು ಪೋಲಿಸರು ಸುಪ್ರೀತ್ ಅವರಿಂದಲೇ ತರಿಸಿ ಸಿಬ್ಬಂದಿಗೆ ನೀಡಿ,‌ ಮುಂದೆನಾದರೂ ತೊಂದರೆ ಆದರೇ ನ್ಯಾಯಾಲಯದಿಂದ ಅನುಮತಿ ಪಡೆದು ಎಫ್ ಐ ಆರ್ ಮಾಡಿಸಬಹುದು ಎಂದು ಹಿಂಬರಹ ನೀಡಿ ಸಿಬ್ಬಂದಿಯನ್ನು ಕಳುಹಿಸಿದರೆನ್ನಲಾಗಿದೆ

ಘಟನೆ ಬಗ್ಗೆ ಮೆಸ್ಕಾಂ ಸಿಬ್ಬಂದಿ ರಾಘವ ಅವರನ್ನು ಸಂಪರ್ಕಿಸಿದಾಗ ಪ್ರಕರಣ ರಾಜಿಯಲ್ಲಿ ಮುಗಿಯಲಿಲ್ಲ. ಎಫ್ ಐ ಆರ್ ದಾಖಲಿಸಬೇಕಾದರೇ ನ್ಯಾಯಾಲಯದಿಂದ ಆದೇಶ ತರಬೇಕು ಇದೊಂದು ಅಸಂಜ್ಞೆಯ ಪ್ರಕರಣವಾಗಿದೆ ಎಂದು ಹಿಂಬರಹ ನೀಡಿ ಕಳುಹಿಸಿದ್ದಾರೆ ಎಂದರು.‌

ಆ.02 ರಂದು ನಾನು ಕರ್ತವ್ಯಕ್ಕೆ ಬರುವ ಮೊದಲೇ ಸಬ್ ಸ್ಟೇಷನ್ ನಲ್ಲಿ ಕಲ್ಲುಗುಂಡಿ ಪೀಡರ್ ನ ಜಂಪರ್ ಕಟ್ ಆಗಿತ್ತು. ಆ ಜಂಪರ್ ಕೊಡಲು ಲೈನ್ ಮ್ಯಾನ್ ಮಣಿಕಂಠ ಅವರು 7 ಪೀಡರ್ ಗಳು
ಲೈನ್ ಕ್ಲಿಯರೆನ್ಸ್ ( LC) ಬೇಕೆಂದು ಕೇಳಿದಾಗ ಸ್ಟೇಷನ್ ಜೆಇ ದಿವ್ಯ , ಎಇ ಸುಪ್ರೀತ್ ಅವರಿಗೆ ತಿಳಿಸಿ ಲೈನ್ ಆಫ್ ಮಾಡಿದ್ದೆ. ಲೈನ್ ಮ್ಯಾನ್ ಕೆಲಸ ವಿಳಂಬ ಮಾಡಿದ್ದಕ್ಕೆ ನನ್ನ ಮೇಲೆ ಕೋಪಗೊಂಡ ಎಇ ಸುಪ್ರೀತ್ ಅವರು ಅವಾಚ್ಯ ಶಬ್ದಗಳಿಂದ ಬೈದು, ಕಛೇರಿಗೆ ಬಂದು ಕಛೇರಿ ಮೊಬೈಲ್ ಮತ್ತು ನನ್ನ ಮೊಬೈಲ್ ಅನ್ನು ಒಡೆದು ಹಾಕಿ, ದೈಹಿಕ ಹಲ್ಲೆ ಮಾಡಿದ್ದಾರೆ. ಸುಪ್ರೀತ್ ಅವರು ಹಲ್ಲೆ ಮಾಡಿದ್ದರಿಂದ ನನ್ನ ಎಡ ಕಣ್ಣಿನ ಭಾಗಕ್ಕೆ ಗಾಯವಾಗಿ ರಕ್ತ ಸೋರಲಾರಂಭಿಸಿತು. ನಂತರ ಜೆಇ ದಿವ್ಯ ಅವರಿಗೆ ತಿಳಿಸಿ ಅವರು ಬಂದ ನಂತರ ನನ್ನನ್ನು ಸಹೋದ್ಯೋಗಿಗಳು ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದರು.

ಅಂದು ಸಂಜೆ ಸುಳ್ಯ ಠಾಣೆಯಲ್ಲಿ ದೂರು ನೀಡಿದೆ. ಠಾಣೆಯಲ್ಲಿ ಪೋಲೀಸರು ಎಇ ಯವರನ್ನು ಕರೆಸಿ ವಿಚಾರಿಸುವ ವೇಳೆ ಎಲ್ಲಾ ಆರೋಪಗಳನ್ನು ಮೊದಲು ನಿರಾಕರಿಸಿದರು. ಅಲ್ಲದೇ ಆರೋಪಗಳಿಗೆ ಸಾಕ್ಷಿ ತಂದು ತೋರಿಸಲಿ ಎಂದರು. ಎಫ್ ಐ ಆರ್ ಮಾಡಲಿ, ಕೇಸಲ್ಲಿ ನಾನು ಗೆಲ್ತೇನೆ. ಮತ್ತೆ ನಾನೇ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಎಂದರು. ಪೋಲೀಸರು ಕೊನೆಗೆ ಅವರಿಂದ ಒಡೆದ ಮೊಬೈಲ್, ಹಾಗೂ ನಷ್ಟ ಪರಿಹಾರವಾಗಿ 10 ಸಾವಿರ ತೆಗೆಸಿಕೊಟ್ಟರು. ಕೇಸು ಮುಂದುವರಿಸಿದರೂ ಸಾಕ್ಷಿಗಳ ಕೊರತೆಯಿಂದ ಹಲ್ಲೆ ಮಾಡಿದಕ್ಕೆ ನನಗೆ ಇಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲದಿರುವುದರಿಂದ ಎಫ್ ಐ ಅರ್ ಮಾಡಲು ಹಿಂಜರಿದೆ, ಮೊಬೈಲ್ ನಲ್ಲಿದ್ದ ಅಮೂಲ್ಯ ದಾಖಲೆಗಳು ಕಳೆದು ಹೋಗಿರುವುದು ಬೇಸರ ತಂದಿದೆ. ಕಛೇರಿಯಲ್ಲಿ ಇನ್ನೂ ಕರ್ತವ್ಯ ನಿರ್ವಹಿಸುವುದಕ್ಕೆ ಭಯ ಆರಂಭವಾಗಿದೆ. ಗುತ್ತಿಗೆ ಕಾರ್ಮಿಕರು ಎಂದು ತಾರತಮ್ಯ ಮಾಡುತ್ತಾರೆ. ಮುಂದೆ ಇಂತಹ ಕೃತ್ಯಗಳು ಆಗದಂತೆ ಸಂಬಂಧಪಟ್ಟವರು ಸೂಕ್ತ ರಕ್ಷಣೆ ನೀಡಬೇಕು, ಕಛೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.