ಸುಳ್ಯ: ಶಾಲೆ ಆರಂಭಗೊಂಡ 30 ದಿನಗಳ ಬಳಿಕ ಶಾಲೆಯೊಂದು ಮುಚ್ಚಿದೆ. ತಾಲೂಕಿನ ಗುತ್ತಿಗಾರು ಕಮಿಲ ಕಿರಿಯ ಪ್ರಾಥಮಿಕ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭವಾಗಿದ್ದರೂ ಶಿಕ್ಷಣ ಇಲಾಖೆಯ ನಿರಾಸಕ್ತಿಯಿಂದ ಮುಚ್ಚುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆಗೆ 0.81 ಸೆಂಟ್ಸ್ ಸ್ವಂತ ಜಾಗವಿದೆ. ಶಾಲಾ ಕಟ್ಟಡ, ಉತ್ತಮ ವೇದಿಕೆ, ಶಾಲಾ ಮೈದಾನವಿದೆ. ಹತ್ತಿರದಲ್ಲೇ ಅಂಗನವಾಡಿಯೂ ಇದೆ. ಆದರೆ ಅಲ್ಲೂ ಮಕ್ಕಳ ಕೊರತೆಯಿದೆ. ಈ ವರ್ಷ ಶಾಲಾರಂಭವಾಗಿ 20 ದಿನಗಳಾಗಿದ್ದಾಗ ನಾಲ್ಕು ಮಕ್ಕಳು ಶಾಲೆಗೆ ಬರುತಿದ್ದರು. ಆದರೆ, ಶಿಕ್ಷಣ ಇಲಾಖೆ ಪೂರ್ಣಾವಧಿ ಶಿಕ್ಷಕರನ್ನು ನೀಡಲಿಲ್ಲ. ನಡುಗಲ್ಲು ಶಾಲೆಯ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು. ಅವರಿಗೆ ಕಮಿಲ ಶಾಲೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಷ್ಟೆ ಇತ್ತು.
ಈ ಶೈಕ್ಷಣಿಕ ವರ್ಷದ ಆರಂಭದಿಂದ ದಿನಕ್ಕೊಂದು ಶಾಲೆಯಿಂದ ಶಿಕ್ಷಕರು ಬಂದು ಇಲ್ಲಿ ಪಾಠ ಮಾಡುತ್ತಿದ್ದರು. ಕೆಲವು ದಿನ ನಡುಗಲ್ಲು ಅಥವಾ ಗುತ್ತಿಗಾರು ಪಿ.ಎಂ.ಶ್ರೀ ಶಾಲೆಯಿಂದ ಶಿಕ್ಷಕರು ಬರುತ್ತಿದ್ದರು. ದಿನಕ್ಕೊಬ್ಬರ ಪಾಠ ಕೇಳಿಸಿಕೊಂಡ ಮಕ್ಕಳು ಇಲ್ಲಿಗೆ ಬರಲು ನಿರುತ್ಸಾಹ ತೋರಿದ್ದರು ಎನ್ನಲಾಗಿದೆ.
ಮತ್ತೆ ಇಲ್ಲಿಗೆ ಅತಿಥಿ ಶಿಕ್ಷಕರೊಬ್ಬರು ಒಂದು ದಿನವಷ್ಟೇ ಬಂದಿದ್ದರು. ಇದರಿಂದಾಗಿ ಪೋಷಕರು ಬೇಸರಗೊಂಡು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಆರು ವರ್ಷಗಳಿಂದ ಇಲ್ಲಿಗೆ ಪೂರ್ಣ ಕಾಲಿಕ ಶಿಕ್ಷಕರನ್ನು ನೀಡದೆ ಬೇರೆ ಶಾಲೆಯ ಶಿಕ್ಷಕರನ್ನು ನಿಯೋಜಿಸಿ ಶಾಲೆ ನಡೆಯುತಿತ್ತು. ಶಿಕ್ಷಣ ಇಲಾಖೆಯ ಅವ್ಯವಸ್ಥೆಯಿಂದಾಗಿಯೇ ಶಾಲೆ ಮುಚ್ಚವಂತಾಯಿತು ಎಂಬುದು ಪೋಷಕರ ದೂರು..
ಸುಳ್ಯ ತಾಲ್ಲೂಕಿನಲ್ಲಿ ಅಧಿಕೃತವಾಗಿ ಏಳು ಶಾಲೆಗಳು ಈಗಾಗಲೇ ಮುಚ್ಚಿದ್ದು, ಅದರಲ್ಲಿ ಗುತ್ತಿಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಶಾಲೆಗಳಿವೆ. ಗುತ್ತಿಗಾರು ಗ್ರಾಮದ ಪೈಕ ಕಿ.ಪ್ರಾ ಶಾಲೆ ಆರಂಭದಿಂದಲೇ ಮುಚ್ಚಿದ್ದು, ಇದೀಗ ಕಮಿಲ ಶಾಲೆ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆದ ಬಳಿಕ ಮುಚ್ಚಿದೆ.