ಮರ್ಕಂಜ: ಮಗನಿಗೆ ತಾಯಿಯಿಂದಲೇ ಕತ್ತಿಯೇಟು| ಗಾಯಾಳು ಆಸ್ಪತ್ರೆಗೆ ದಾಖಲು

ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ, ತಾಯಿಯೇ ಮಗನಿಗೆ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ವರದಿಯಾಗಿದೆ.

ಏಪ್ರಿಲ್ 26ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದಂಗೂರು ನಿವಾಸಿ ರಾಮಚಂದ್ರ ಗಾಯಗೊಂಡವರು. ಇವರ ತಾಯಿ ಯಶೋದಾ ಕೃತ್ಯ ಎಸಗಿದವರು ಎಂದು ಗುರುತಿಸಲಾಗಿದೆ.

ರಾತ್ರಿ ಮಗ ರಾಮಚಂದ್ರ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ತಾಯಿ ಮತ್ತು ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ ಆಕ್ರೋಶಗೊಂಡ ತಾಯಿ ಮನೆಯಲ್ಲಿದ್ದ ಕತ್ತಿಯಿಂದ ಮಗನಿಗೆ ಕಡಿದಿದ್ದಾರೆ ಎಂದು ತಿಳಿದು ಬಂದಿದೆ.

ಕತ್ತಿ ಏಟಿನಿಂದ ತೀವ್ರವಾಗಿ ಗಾಯಗೊಂಡ ರಾಮಚಂದ್ರ ಅವರನ್ನು ತಕ್ಷಣವೇ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.