ಪಂಜ: ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಸಂಗ್ರಹವಾದ ತೆರಿಗೆಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಗ್ರಾಮ ಪಂಚಾಯತ್ ಪಿ.ಡಿ.ಒ. ಜಯಂತ್ ಹಾಗೂ ಪ್ರಭಾರ ಕಾರ್ಯದರ್ಶಿ ಸೀತಾರಾಮರವರನ್ನು ಸೇವೆಯಿಂದ ಅಮಾನತುಗೊಳಿಸಿ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆಯವರು ಆದೇಶ ಮಾಡಿದ್ದಾರೆ.
ಪಂಜ ಗ್ರಾ.ಪಂ.ನಲ್ಲಿ ಅಲ್ಲಿನ ಸಿಬ್ಬಂದಿ ಬಾಬು ಎಂಬವರು 13 ಲಕ್ಷ ರೂ.ಗಳಿಗಿಂತ ಹೆಚ್ಚು ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಗ್ರಾ.ಪಂ. ಆಡಳಿತ ಮಂಡಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೋಲೀಸ್ ದೂರು ನೀಡಿ ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿ ದಲಿತ ದೌರ್ಜನ್ಯದ ಆರೋಪಗಳೆಲ್ಲ ನಡೆದು, ಪಂಜ ಪಂಚಾಯತ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯೂ ನಡೆದಿತ್ತು.
ಇಷ್ಟೊಂದು ತೆರಿಗೆ ಹಣ ಒಂದು ತಿಂಗಳಲ್ಲಿ ದುರುಪಯೋಗ ಮಾಡಲು ಸಾಧ್ಯವಿಲ್ಲವಾದುದರಿಂದ ಪಿ.ಡಿ.ಒ., ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯೂ ಕಾರಣವೆಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಇದೀಗ ಪಂಚಾಯತ್ ಪಿ.ಡಿ.ಒ. ಮತ್ತು ಪ್ರಭಾರ ಕಾರ್ಯದರ್ಶಿಯವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಜಿ.ಪಂ. ಸಿ.ಇ.ಒ. ಅಮಾನತು ಮಾಡಿದ್ದಾರೆ.