ಸುಳ್ಯ: ಬೀರಮಂಗಲದಲ್ಲಿರುವ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಜ.20ರಂದು ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸೈಂಟ್ ಬ್ರಿಜಿಡ್ಸ್ ಶಾಲಾ ಜತೆ ಕಾರ್ಯದರ್ಶಿ ಹಾಗೂ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರು ವಂ| ಒಲ್ವಿನ್ ಎಡ್ವರ್ಡ್ ಡಿಕುನ್ಹಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 9 ಗಂಟೆಗೆ ದಿವ್ಯಬಲಿ ಪೂಜೆ ಕಾರ್ಯಕ್ರಮ, 10.15ಕ್ಕೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ವಂ। ಒಲ್ವಿನ್ ಎಡ್ವರ್ಡ್ ಡಿ’ಕುನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಎಸ್. ಎಂ. ಬಾಪೂಸಾಹೇಬ್, ನಗರ ಪಂಚಾಯತ್ ಮಾಜಿ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಸುಳ್ಯ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಶಹನಾಝ್, ಯಶ್ಚಿತ್ ಕಾಳಂಮನೆ, ಡಾ। ಸುನಿಧಿ ಎಸ್., ಚಲನಚಿತ್ರ ನಿರ್ದೇಶಕ ಮಯೂರ್ಅಂಬೆಕಲ್ಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30 ಅಮೃತಮಹೋತ್ಸವ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಪೀಟರ್ ಸಲ್ದಾನ್ಹಾ ವಹಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ| ಪ್ರವೀಣ್ ಲಿಯೋ ಲಸ್ರಾದೊ, ಪದ್ಮಶ್ರೀ ಗಿರೀಶ್ ಭಾರದ್ವಾಜ್, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫಾ, ಸೈಂಟ್ ಬ್ರಿಜಿಡ್ಸ್ ಶಾಲೆಯ ಹಿರಿಯ ವಿದ್ಯಾರ್ಥಿ, ಪ್ರಿನ್ಸಿಪಾಲ್ – ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಅರ್ಶದ್ ಅನ್ಸಾರಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಂಗಳೂರು ಪ್ರಾಂತ ಪ್ರಾಂತೀಯ ಮುಖ್ಯಸ್ಥೆ ಸಿಸ್ಟರ್ಕ್ಷೇರಾ ಮಿನೇಜಸ್, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು. ಕೆ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಸುನೀಲ್ ಮಸ್ಕರೇನಸ್, ಸೈಂಟ್ ಜೊಸೆಫ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸಿಸ್ಟರ್ಮೇರಿ ಸ್ಟೆಲ್ಲಾ ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಗೋಷ್ಟಿಯಲ್ಲಿ ಬ್ರಿಜಿಡ್ಸ್ ಮುಖ್ಯ ಶಿಕ್ಷಕಿ ಸಿಸ್ಟರ್ ಆ್ಯಂಟಿನಿ ಮೇರಿ, ಪಾಲನ ಸಮಿತಿ ಉಪಾಧ್ಯಕ್ಷ ಸುನೀಲ್ ಮಸ್ಕರೇನಸ್, ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ನವೀನ್ ಮಚಾದೋ ಉಪಸ್ಥಿತರಿದ್ದರು.