ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥುರ್ ಅವರು ಭೇಟಿ ನೀಡಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಬಳಕೆದಾರರ ಅಹವಾಲು ಆಲಿಸಿದರು.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಪ್ರಯಾಣಿಕ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಅಂಶಗಳನ್ನು ಅವಲೋಕಿಸಿದರು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಸಕಲೇಶಪುರ ಘಾಟ್ ಸೆಕ್ಷನ್‌ನ ವಿದ್ಯುದ್ದೀಕರಣ ಕಾರ್ಯಗಳನ್ನೂ ಪರಿಶೀಲಿಸಿದರು. ಹೊಸದಾಗಿ ವಿದ್ಯುದೀಕೃತಗೊಳ್ಳುತ್ತಿರುವ ಭಾಗದ ಸಿದ್ಧತೆ ಹಾಗೂ ಭದ್ರತಾ ಮಾನದಂಡಗಳನ್ನು ಪರಿಶೀಲಿಸಿದರು. ಜತೆಗೆ ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ವಿಭಾಗದಲ್ಲಿ ವಿಂಡೋ ಟ್ರೈಯಾಂಗಲ್ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ಹಳಿಗಳ ಸ್ಥಿತಿ, ಸಿಗ್ನಲ್ ವ್ಯವಸ್ಥೆಗಳು ಹಾಗೂ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕೆ ಅಗತ್ಯವಿರುವ ಇತರೆ ಕಾರ್ಯಾಚರಣೆ ಅಂಶಗಳ ಮೌಲ್ಯಮಾಪನ ಮಾಡಿದರು.
ಮುಕುಲ್ ಸರನ್ ಮಾಥುರ್, ಮುದಿತ್ ಮಿತ್ತಲ್ ಅವರು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿ, ರೈಲ್ವೆ ಸೌಲಭ್ಯಗಳು, ಸೇವೆಗಳು ಮತ್ತು ಪ್ರಯಾಣ ಅನುಭವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿ ಪ್ರಯಾಣಿಕರಿಂದ ದೊರೆತ ಸಲಹೆಗಳನ್ನು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ -ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಪುತ್ತೂರು, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಜಿ., ಮತ್ತಿತರರು ಉಪಸ್ಥಿತರಿದ್ದರು.