ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನವೆಂಬರ್ 16ರಿಂದ ಡಿಸೆಂಬರ್ 2ರ ತನಕ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನವೆಂಬರ್ 14ರಿಂದ ಡಿಸೆಂಬರ್ 2ರ ತನಕ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ನೆರವೇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ನವೆಂಬರ್ 13ರಂದು ಆರಂಭವಾದ ಸರ್ಪಸಂಸ್ಕಾರ ಸೇವೆ ಕೊನೆಗೊಳ್ಳುತ್ತದೆ ಆದರೆ ನವೆಂಬರ್ 14ಕ್ಕೆ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ನವೆಂಬರ್ 15ರಂದು ಶನಿವಾರ ಏಕಾದಶಿ ಹಾಗೂ ಮೂಲಮೃತ್ತಿಕಾ ಪ್ರಸಾದ ವಿತರಣೆ, ನವೆಂಬರ್ 16ರಂದು ಕೊಪ್ಪರಿಗೆ ಏರಿ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ನವೆಂಬರ್ 14ರಿಂದಲೇ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ಅಲ್ಲದೆ ಡಿ.2ರಂದು ಕೊಪ್ಪರಿಗೆ ಇಳಿಯುವವರೆಗೆ ಸರ್ಪಸಂಸ್ಕಾರ ಇರುವುದಿಲ್ಲ.
ಚಂಪಾಷಷ್ಠಿ ಜಾತ್ರೋತ್ಸವವು ನವೆಂಬರ್ 16ರಿಂದ ಡಿಸೆಂಬರ್ 2ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶಗಳು ಇರುವುದಿಲ್ಲ.