ಸುಬ್ರಹ್ಮಣ್ಯ: ಡಾ. ಕೆ.ವಿ ರೇಣುಕಾಪ್ರಸಾದ್ ರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥ ಇಂದು ಕುಕ್ಕೆ ಪುರಪ್ರವೇಶ| ಸುಳ್ಯ ತಲುಪಿದ ರಥದ ಶೋಭಾಯಾತ್ರೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೆ ಸಮರ್ಪಣೆಯಾಗಲಿರುವ ಬೆಳ್ಳಿರಥವು ಇಂದು‌ ಕುಕ್ಕೆಗೆ ಪುರ ಪ್ರವೇಶವಾಗಲಿದ್ದು, ಸುಳ್ಯ ತಲುಪಿದ ರಥಕ್ಕೆ ಅದ್ದೂರಿ ಸ್ವಾಗತ ದೊರಕಿದೆ.

ಕುರುಂಜಿಯ ಡಾ.ಕೆ.ವಿ ರೇಣುಕಾಪ್ರಸಾದ್ ಮತ್ತುನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥವು ಕೋಟೇಶ್ವರದಿಂದ ಹೊರಟು ಮಂಗಳವಾರ ರಾತ್ರಿ ಸುಳ್ಯ ತಲುಪಿದೆ. ಇಂದು(ನ.5) ಸುಳ್ಯದ ಕಾಂತಮಂಗಲದಿಂದ ಹೊರಡಲಿರುವ ರಥವು ಸುಳ್ಯ – ಪೈಚಾರು – ಸೋಣಂಗೇರಿ – ದುಗ್ಗಲಡ್ಕ – ಎಲಿಮಲೆ – ಮಾವಿನಕಟ್ಟೆ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ತಲುಪಲಿದೆ.

ಅಲ್ಲಿ ರಥಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಪೂಜಾ ಕೈಂಕರ್ಯ ಬಳಿಕ ಭಕ್ತಾದಿಗಳಿಗೆ ಅನ್ನಸಂತಪರ್ಣೆ ನಡೆದು ನಂತರ ಸುಬ್ರಹ್ಮಣ್ಯದತ್ತ ರಥವು ತೆರಳಲಿದೆ. ದಾರಿಯುದ್ದಕ್ಕೂ ಭಕ್ತಾದಿಗಳಿಂದ‌ ಅಭೂತಪೂರ್ವ ಸ್ವಾಗತಕ್ಕೆ ತಯಾರಿ‌ ನಡೆದಿದ್ದು, ರಥವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಬೆಳ್ಳಿರಥವು ನ.10ರ ಸೋಮವಾರ ಕುಕ್ಕೆ ಸುಬ್ರಹ್ಮಣ್ಯನಿಗೆ ಸಮರ್ಪಣೆಯಾಗಲಿದ್ದು, ಹೆಚ್ಚಿನ ‌ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಆಡಳಿತ ಮಂಡಳಿ ಹಾಗೂ ರಥದಾನಿಗಳು ವಿನಂತಿಸಿದ್ದಾರೆ.