ಸುಳ್ಯ: ಇಲ್ಲಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಸುಳ್ಯದ ಜಟ್ಟಿಪಳ್ಳ ಬಳಿಯ ಕಾನತ್ತಿಲ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ದುಗಲಡ್ಕ ಕೇಶವ ಪೂಜಾರಿ ಎಂಬವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ವೀಕ್ಷಿತ್ (19 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.
ಮಂಗಳವಾರ (ಅ.28) ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲಾಸ್ ಟೆಸ್ಟ್ ಇದ್ದು ಅದನ್ನು ಮುಗಿಸಿದ್ದ ವೀಕ್ಷಿತ್, ಎಂದಿನಂತೆ ಸಂಜೆ ತನ್ನ ತಾಯಿಯನ್ನು ಅವರು ಕೆಲಸ ಮಾಡುವಲ್ಲಿಂದ ಮನೆಗೆ ಕರೆದುಕೊಂಡು ಬರಲು ಬರದೆ ಇದ್ದುದಲ್ಲದೆ, ಫೋನ್ ಕೂಡ ಸ್ವೀಕರಿಸದಿದ್ದುದನ್ನು ಕಂಡು ತಾಯಿ ಪದ್ಮಿನಿಯವರು ಪಕ್ಕದ ಮನೆಯವರಿಗೆ ಫೋನ್ ಮಾಡಿ ರೂಮಿನಲ್ಲಿ ವೀಕ್ಷಿತ್ ಇದ್ದಾನೋ ಇಲ್ಲವೋ ಎಂದು ನೋಡಲು ಹೇಳಿದರೆಂದೂ ಪಕ್ಕದ ರೂಮಿನವರು ಬಂದು ನೋಡುವಾಗ ವೀಕ್ಷಿತ್ ಆತ್ಮಹತ್ಯೆ ಕೊಂಡಿರುವುದು ಕಂಡುಬಂತೆಂದೂ ತಿಳಿದುಬಂದಿದೆ.
ಸುಳ್ಯ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.