ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಭ್ರಹ್ಮಣ್ಯ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಾಳುಗೋಡು ಇವುಗಳ ಸಂಯುಕ್ತ ಆಶ್ರಮದಲ್ಲಿ ಸಾಮಾಜಿಕ ಅರಣೀಕರಣ ಹಣ್ಣು ಹಂಪಲು ಗಿಡಗಳ ನಾಟಿ ಕಾರ್ಯಕ್ರಮವನ್ನು ಬಾಳುಗೋಡು ಅರಣ್ಯ ಪ್ರದೇಶದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಸುಭ್ರಹ್ಮಣ್ಯ ವಲಯದ ಉಪ ವಲಯ ಅರಣ್ಯ ಅಧಿಕಾರಿರವರಾದ ಸದಾಶಿವರವರು ಗಿಡ ನಾಟಿ ಮಾಡುವ ಮುಖೇನ ಚಾಲನೆಯನ್ನು ಮಾಡಿ ಮಾತನಾಡುತ್ತ, ಶ್ರೀ ಕ್ಷೇತ್ರ ಧರ್ಮಸ್ಥದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ಮುಖೇನ ಇಡೀ ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣೀಕರಣ ಕಾರ್ಯಕ್ರಮವನ್ನು ನಡೆಸಿ, ಲಕ್ಷಾಂತರ ಹಣ್ಣು ಹಂಪಲುಗಳ ಗಿಡಗಳನ್ನು ನಾಟಿ ಮಾಡಿಸಿದ್ದಾರೆ. ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರವನ್ನು ಎಲ್ಲಾರು ಸೇರಿ ಉಳಿಸಬೇಕು. ಕಾಡಿನಲ್ಲಿ ಹಣ್ಣು ಹಂಪಲುಗಳ ಮರಗಳನ್ನು ಬೆಳೆಸಿದರೆ ಪ್ರಾಣಿಗಳು ಪಕ್ಷಿಗಳು ನಾಡಿಗೆ ಬರುವಂತದು ಕಡಿಮೆ ಆಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಾಳುಗೋಡು ಗ್ರಾಮದ ಶ್ರೀ ಶಿರಾಡಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವಸಂತ ಕಿರುಭಾಗರವರು ಮಾತನಾಡುತ್ತ, ಈಗಿನ ಪರಿಸ್ಥಿತಿಯಲ್ಲಿ ಕಾಡುಗಳಲ್ಲಿ ಅತೀ ಹೆಚ್ಚು ಗಿಡಗಳನ್ನು ನೆಟ್ಟು ಕಾಡು ಪ್ರದೇಶವನ್ನು ಉಳಿಸಬೇಕು. ಇದರಿಂದ ಪರಿಸರವು ಶುಭ್ರವಾಗುತ್ತದೆ. ಪ್ರಾಣಿ ಪಕ್ಷಿಗಳು ನಾಡಿಗೆ ಬಂದು ಕೃಷಿ ನಾಶವನ್ನು ಮಾಡುವುದು ತಪ್ಪುತ್ತದೆ. ಆದರೆ ನಾವೆಲ್ಲರೂ ಸೇರಿ ಗಿಡಗಳನ್ನು ನೆಡುವುದು ಮಾತ್ರವಲ್ಲ, ಅದನ್ನು ಬೆಳೆಸಿ ಪೋಷಣೆ ಮಾಡುವಂತದು ನಮ್ಮೆಲ್ಲಾರ ಕರ್ತವ್ಯ ಆಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕೃಷಿ ಮೇಲ್ವಿಚಾರಕರಾದ ರಮೇಶ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸುಳ್ಯ ತಾಲೂಕಿನ ಸದಸ್ಯರಾದ ಮತ್ತು ಸುಭ್ರಹ್ಮಣ್ಯ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಯವರಾದ ಸತೀಶ್ ಟಿ ಎನ್, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಶಿಲ್ಪಾ ಕೊತ್ತನಡ್ಕ, ಬಾಳುಗೋಡು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಟಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿರವರಾದ ಸಾವಿತ್ರಿ, ಸುಭ್ರಹ್ಮಣ್ಯ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಬಾಳುಗೋಡು ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಬಾಳುಗೋಡು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ದೀಕ್ಷಾರವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಧನ್ಯವಾದವಿತ್ತರು.