ಸಂಪಾಜೆ: ಕೃಷಿ ತೋಟಕ್ಕೆ ಆನೆ ದಾಳಿ ನಡೆಸಿದ್ದು, ಈ ವೇಳೆ ಪರಿಶೀಲಿಸಲು ತೆರಳಿದ್ದ ಕೃಷಿಕತೋರ್ವರನ್ನು ಆನೆ ತುಳಿದು ಮೃತಪಟ್ಟ ಘಟನೆ ಸಂಪಾಜೆ ಸಮೀಪದ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಆ.6ರ ರಾತ್ರಿ ವರದಿಯಾಗಿದೆ.
ದಬ್ಬಡ್ಕದ ಶಿವಪ್ಪ ರವರು ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಆ.06 ರಂದು ರಾತ್ರಿ ನಾಯಿ ಬೊಗಳುತ್ತಿದ್ದ ಕಾರಣ ತೋಟಕ್ಕೆ ಹೋದಾಗ ಆನೆ ಅವರನ್ನು ತುಳಿಯಿತು ಎನ್ನಲಾಗಿದೆ. ಕೂಡಲೇ ಅವರನ್ನು ಸಂಪಾಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಮೃತ ಪಟ್ಟರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಂಪಾಜೆ ವಲಯಾರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇತ್ತೀಚೆಗೆ ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಯಲು ಅರಣ್ಯ ಇಲಾಖೆಗೆ ಒತ್ತಾಯಿಸಲಾಗಿತ್ತು.