ಸಮಗ್ರ ನ್ಯೂಸ್: ಕರಾವಳಿ ಮತ್ತು ಕುಮಾರಪರ್ವತ ತಪ್ಪಲಿನ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಮೇ 26ರಂದು ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕುಮಾರಧಾರಾ ನದಿಯ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಪ್ರತಿವರ್ಷ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸುವ ಸಂದರ್ಭಗಳಲ್ಲಿ ಕುಮಾರಧಾರಾ ನದಿಯಲ್ಲಿ ತೀರ್ಥಸ್ನಾನ ಮಾಡುವ ಪದ್ಧತಿಯಿದೆ. ಆದರೆ ಈಗ ನದಿಯ ನೀರಿನ ಮಟ್ಟವು ಸಾಮಾನ್ಯಕ್ಕಿಂತ ಸಾಕಷ್ಟು ಹೆಚ್ಚಾಗಿದ್ದು, ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ನಾನಘಟ್ಟದಲ್ಲಿ ನೀರು ತುಂಬಿದರೂ ಕೆಲ ಯಾತ್ರಾರ್ಥಿಗಳು ನೆರೆ ನೀರನ್ನೂ ಲೆಕ್ಕಿಸದೆ ನದಿಯ ಕಡೆಗೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಮನಗಂಡ ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ನದಿಗೆ ಇಳಿಯದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ.
ದೇವಾಲಯ ಆಡಳಿತ ಮಂಡಳಿಯ ಸೂಚನೆಯಂತೆ ಭದ್ರತಾ ಸಿಬ್ಬಂದಿಯವರು ಸ್ಥಳದಲ್ಲಿದ್ದು ಭಕ್ತರಿಗೆ ಮುಂಜಾಗ್ರತಾ ಸೂಚನೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಭಕ್ತರು ನದಿ ಹತ್ತಿರ ಹೋಗದೇ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ .