ಸಂಪಾಜೆ: ಕಾಡು ಪ್ರಾಣಿ ಹತ್ಯೆ ಮಾಡಿ ಮಾಂಸ ಮಾರಾಟ|ಇಬ್ಬರ ಬಂಧನ; ಓರ್ವ ಪರಾರಿ

ಸಂಪಾಜೆ: ಇಲ್ಲಿನ ಚೆಂಬು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ 2 ಮಂದಿ ಆರೋಪಿಗಳನ್ನು ಕೊಡಗು ಕೊಯನಾಡು ಅರಣ್ಯವಲಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ನಡೆದಿದೆ.

ಆರೋಪಿಗಳನ್ನು ಗೌತಮ್ ಚೆಂಬು , ಶರತ್ ಪೆರಾಜೆ , ಹಾಗೂ ಯತಿನ್ ಕಾಡುಪಂಜ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಡಗು ವ್ಯಾಪ್ತಿಗೆ ಒಳಪಟ್ಟ ಚೆಂಬು ಅರಣ್ಯದ ಕಾಡುಪಂಜ ಎಂಬಲ್ಲಿ ಕಾಡುಕೋಣವನ್ನು ಕೋವಿಯಿಂದ ಬೇಟೆಯಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ . ಬಳಿಕ ಮಾಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಕೆ. ಎ 12 ರಿಜಿಸ್ಟ್ರೇಷನ್ ನ ಇಕೋ ಕಾರಿನ ಮೂಲಕ ಕಲ್ಲುಗುಂಡಿಯ ಕೈಪಡ್ಕ ಬಳಿ ತಲುಪಿದ್ದು, ಅರಣ್ಯ ಇಲಾಖೆಯ ಚುರುಕಿನ ದಾಳಿಯಿಂದ ಕಾರನ್ನು ಅಡ್ಡಗಟ್ಟಿ ಮಾಂಸ ,ಕೋವಿ ಹಾಗೂ ಕಾರು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಮೂರನೇ ಆರೋಪಿ ಯತಿನ್ ಕಾಡುಪಂಜ ತಲೆಮರೆಸಿಕೊಂಡಿದ್ದು ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಎ.ಸಿ. ಎಫ್ ಸೆಂದಿಲ್ ಕುಮಾರ್ (IFS) ವಲಯ ಅರಣ್ಯಧಿಕಾರಿ ಶ್ರೀಮತಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯಧಿಕಾರಿ ಶ್ರೀಮತಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ ಕೃಷ್ಣ ಹಾಗೂ ಸಂಪಾಜೆ ವಲಯದ ಗಸ್ತು ಅರಣ್ಯ ಪಾಲಕ ಯಮನೂರಿ ಕೊಳೂರು, ಕಾರ್ತಿಕ್. ಡಿ, ಸಿದ್ದೇಶ್, ನಾಗರಾಜ್. ಎಸ್, ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.