ನಿಂತಿಕಲ್ಲು: 9ನೇ ತರಗತಿಯ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕರಿಂಬಿಲದಿಂದ ವರದಿಯಾಗಿದೆ. ಇಲ್ಲಿನ ನಿವಾಸಿ ಪೂರ್ಣಚಂದ್ರರವರ ಪುತ್ರ, ಎಣ್ಮೂರು ಹೈಸ್ಕೂಲಿನ ೯ನೇ ತರಗತಿ ವಿದ್ಯಾರ್ಥಿ ಶಿಶಿಲ್ ಹೃದಯಾಘತದಿಂದ ಮೃತಪಟ್ಟ ದುರ್ದೈವಿ.
ಕಳೆದ ಕೆಲವು ದಿನಗಳಿಂದ ಅಸೌಖ್ಯಕ್ಕೊಳಗಾಗಿದ್ದ ಶಿಶಿಲ್ ಕಾಣಿಯೂರು, ಪುತ್ತೂರು, ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿತ್ತು. ಜು.೬ರಂದು ಬೆಂಗಳೂರಿಗೆ ಹೋಗಲು ತೀರ್ಮಾನಿಸಲಾಗಿದ್ದು, ಜು.೫ರಂದು ರಾತ್ರಿ ತೀವ್ರ ಅಸೌಖ್ಯಕ್ಕೊಳಗಾದರು. ರಾತ್ರಿಯೇ ಚಿಕಿತ್ಸೆಗೆಂದು ಪುತ್ತೂರಿಗೆ ಕರೆದೊಯ್ಯುವ ವೇಳೆ ಶಿಶಿಲ್ ಹೃದಯಾಘಾತದಿಂದ ಮೃತಪಟ್ಟನೆಂದು ತಿಳಿದು ಬಂದಿದೆ.
ಶಿಶಿಲ್ ತಂದೆ, ತಾಯಿ ಕವಿತಾ, ಸಹೋದರ ಗಾಯನ್, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶಿಶಿಲ್ ಯಕ್ಷಗಾನ ಹಾಗೂ ನಾಟಕ ಕಲಾವಿದನಾಗಿದ್ದ. ಶಿಶಿಲ್ ಅಗಲುವಿಕೆಯಿಂದ ಆಪ್ತವರ್ಗ ಮರುಗಿದೆ.