ಸುಳ್ಯ: ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದ ಜಾರ್ಖಂಡ್ ಮೂಲದ ಯುವಕನಿಗೆ ಜಾಮೀನು

ಸುಳ್ಯ: ತನ್ನೂರಿನ ಅಪ್ರಾಪ್ತ ಬಾಲಕಿಯನ್ನು ಸುಳ್ಯ ತಾಲ್ಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಎಂಬಲ್ಲಿಗೆ ಕರೆದುಕೊಂಡು ಬಂದು ಲೈಂಗಿಕ ಕಿರುಕುಳ ನೀಡಿದ್ದ ಪೊಕ್ಸೊ ಪ್ರಕರಣದ ಆರೋಪಿ, ಜಾರ್ಖಂಡ್ ಮೂಲದ ರೇಮುಂಡ ಎಂಬುವನಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ರೇಮುಂಡ ತನ್ನ ಊರಿನ ಬಾಲಕಿಯನ್ನು ಪಾಲೆಪ್ಪಾಡಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ವಿಚಾರ ಬಹಿರಂಗಗೊಂಡ ಬಳಿಕ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಕಳೆದ ಫೆ. 13ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ರೇಮುಂಡ ಪುತ್ತೂರಿನ ವಕೀಲ ಮಹೇಶ್ ಕಜೆ ಅವರ ಮೂಲಕ ಪುತ್ತೂರಿನ 5ದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ವಾದ- ವಿವಾದ ಆಲಿಸಿದ ನ್ಯಾಯಾಧೀಶೆ ಸರಿತಾ ಡಿ. ಅವರು ಮೇ 19ರಂದು ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.