ಸುಬ್ರಹ್ಮಣ್ಯ: ನೋಟೀಸ್ ನೀಡಿದ ಬೆನ್ನಲ್ಲೇ 2.67 ಕೋಟಿ ತೆರಿಗೆ ಪಾವತಿಸಿದ ಕುಕ್ಕೆ ಆಡಳಿತ ಮಂಡಳಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಬಾಕಿಯಾಗಿದ್ದ ರೂ. 2 ಕೋಟಿ 67 ಲಕ್ಷ ಆಸ್ತಿ ತೆರಿಗೆಯನ್ನು ಇಂದು ಪಾವತಿಸಲಾಗಿದೆ ಎಂದು ವರದಿಯಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಸತಿಗೃಹಗಳ ಆಸ್ತಿ ತೆರಿಗೆ ದೀರ್ಘಕಾಲ ಬಾಕಿ ಉಳಿದಿದ್ದ ಹಿನ್ನೆಲೆಯಲ್ಲಿ, ವಸತಿಗೃಹ ಜಪ್ತಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್‌ ನೋಟಿಸ್‌ ಜಾರಿ ಮಾಡಿತ್ತು.

ಈ ನೋಟಿಸ್‌ ನೀಡಿದ ಬಳಿಕವೇ ದೇವಸ್ಥಾನ ಆಡಳಿತದಿಂದ ಬಾಕಿ ತೆರಿಗೆ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ಲೇಷ ವಸತಿಗೃಹಕ್ಕೆ ಸಂಬಂಧಿಸಿದಂತೆ ರೂ. 1 ಕೋಟಿ 23 ಲಕ್ಷ ಹಾಗೂ ದೇವಸ್ಥಾನಕ್ಕೆ ಸೇರಿದ ಇತರೆ ಕೆಲವು ಕಟ್ಟಡಗಳ ರೂ. 1 ಕೋಟಿ 44 ಲಕ್ಷ ಆಸ್ತಿ ತೆರಿಗೆ ಬಾಕಿಯನ್ನು ಪಾವತಿಸಲಾಗಿದೆ. ಈ ಮೂಲಕ ಒಟ್ಟು ರೂ. 2 ಕೋಟಿ 67 ಲಕ್ಷ ತೆರಿಗೆ ಮೊತ್ತ ಗ್ರಾಮ ಪಂಚಾಯತ್‌ಗೆ ಸಂದಿದೆ. ಈ ಬೆಳವಣಿಗೆಗೆ ಕಡಬ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಸಂತಸ ವ್ಯಕ್ತಪಡಿಸಿದ್ದು, ಬಾಕಿ ತೆರಿಗೆ ಪಾವತಿಸಿದಕ್ಕಾಗಿ ದೇವಸ್ಥಾನ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ಆದಾಯ ₹155.95 ಕೋಟಿ ಆಗಿತ್ತು. ಈ ಆದಾಯವು 2023-24ನೇ ಸಾಲಿಗೆ ಹೋಲಿಸಿದರೆ 9.94 ಕೋಟಿ ರೂ. ಹೆಚ್ಚಾಗಿದ್ದು, ದೇವಸ್ಥಾನವು ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ದೇವಸ್ಥಾನದ ಒಟ್ಟು ಖರ್ಚು 79.82 ಕೋಟಿ ರೂ. ಆಗಿತ್ತು. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುವ ಈ ದೇಗುಲವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಈ ಆದಾಯ ಬಂದಿದೆ.