ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇಗುಲದ ಆನೆ ಯಶಸ್ವಿನಿಯು ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಕೆಲ ಹೊತ್ತು ಆತಂಕ ಸೃಷ್ಟಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದೆ.
ಭಕ್ತರೊಂದಿಗೆ ಬೆರೆಯುತ್ತ ಆಟವಾಡುತ್ತಿದ್ದ ಯಶಸ್ವಿನಿ ಆನೆ ಇದ್ದಕ್ಕಿದ್ದಂತೆ ಅಸಮಾಧಾನಗೊಂಡಿದ್ದು, ಅಡ್ಡ ಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಬದಿಗೆ ಎಸೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಘಟನೆ ನಡೆದ ಕೆಲ ಕ್ಷಣದಲ್ಲೇ ಯಶಸ್ವಿನಿ ಆನೆ ಶಾಂತವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಮಕ್ಕಳು, ಭಕ್ತರು ಆನೆಗೆ ನೀರೆರಚಿದರೆ, ಆನೆ ಸೊಂಡಿಲಿನಿಂದ ಅವರತ್ತ ನೀರು ಚಿಮುಕಿಸಿದೆ. ಸಿಬ್ಬಂದಿಗೂ ಯಾವುದೇ ಗಾಯವಾಗಿಲ್ಲ.