ಮಾರಿಷಸ್ ನಲ್ಲಿ ನಾಲ್ಕೂರಿನ ಯುವಕ ಸಾವು

ಗುತ್ತಿಗಾರು: ಮಾರಿಷಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಯುವಕ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಲ್ಕೂರು ಗ್ರಾಮದ ಕಲ್ಲಾಜೆಯ ಜಯಲಕ್ಷ್ಮಿ ಭಟ್ ಅವರ ಪುತ್ರ ನಂದನ್ ಭಟ್ (26) ಮೃತ ದುರ್ದೈವಿ.

ನಂದನ್ ಎಸ್. ಭಟ್ ಅವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಅಧ್ಯಯನ ನಡೆಸುತ್ತಿದ್ದರು. ನಿನ್ನೆ (ಅ.13) ಜಲಪಾತ ವೀಕ್ಷಣೆಗೆಂದು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರ ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಇವರ ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಮಧ್ಯೆ ಪ್ರವೇಶಿಸಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ನಂದನ್ ಭಟ್ ಮಾರಿಷಸ್ ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಂ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.