ಸುಬ್ರಹ್ಮಣ್ಯ: ರಾಜ್ಯದ ಪ್ರತಿಷ್ಠಿತ ಮತ್ತು ಅತಿ ಹೆಚ್ಚು ಆದಾಯ ಹೊಂದಿರುವ ಕುಕ್ಕೆ ಸುಬ್ರಹಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿದ ವಿಧಾನದ ಕುರಿತು ಹೂಡಲಾಗಿರುವ ದಾವೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ವ್ಯವಸ್ಥಾಪನಾ ಸಮಿತಿಯನ್ನು ವಜಾ ಮಾಡಬೇಕೆಂದು ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲೊಬ್ಬರು ಧಾರ್ಮಿಕ ದತ್ತಿ ಇಲಾಖೆಯ ಕಮಿಷನರ್ರಿಗೆ ದೂರುತ್ತಿರುವುದಲ್ಲದೆ, ದಾವೆಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೂ ಆ ಬಗೆಗೆ ಲಿಖಿತ ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ.
ಸುಮಾರು ಆರು ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ರಾಜ್ಯ ಧಾರ್ಮಿಕ ಪರಿಷತ್ ಮಾಡಿದ ನಿರ್ಣಯದ ಪ್ರಕಾರ ಧಾರ್ಮಿಕ ದತ್ತಿ ಇಲಾಖೆ ಸಮಿತಿ ರಚನೆಯ ಆದೇಶ ಹೊರಡಿಸಿತ್ತು. ಆ ಸಮಿತಿಗೆ ಸುಬ್ರಹ್ಮಣ್ಯದವರೇ ಆದ ಹರಿಶ್ ಇಂಜಾಡಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ನೇಮಕದ ವಿರುದ್ಧ ಸುಬ್ರಹ್ಮಣ್ಯದ ಉದ್ಯಮಿ ಆಕಾಶ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿ ಈ ನೇಮಕ ವಿಧಾನ ಸರಿಯಲ್ಲವೆಂದೂ, ಅದಕ್ಕೆ ತಡೆಯಾಜ್ಞೆ ನೀಡಬೇಕೆಂದೂ ಕೋರಿದ್ದರು. ದಾವೆಗೆ ಅವರು ಸರಕಾರಿ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಈ ದಾವೆ ವಿಚಾರಣೆಯಾಗುವಾಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನೂ ಪಾರ್ಟಿ ಮಾಡಬೇಕೆಂದು ಹರೀಶ್ ಇಂಜಾಡಿಯವರ ಪರ ನ್ಯಾಯವಾದಿಗಳು ಕೋರಿಕೊಂಡ ಮೇರೆಗೆ ವ್ಯ.ಸಮಿತಿಯ ಎಲ್ಲಾ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಿ ಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅಧ್ಯಕ್ಷ ಹರೀಶ್ ಇಂಜಾಡಿಯವರು ತಮ್ಮ ಪರ ವಾದ ಮಂಡನೆ ಮಾಡಿದ್ದರು. ಪರಿಣಾಮವಾಗಿ ನೇಮಕಕ್ಕೆ ತಡೆಯಾಜ್ಞೆ ದೊರೆಯದೆ ವಿಚಾರಣೆ ನಡೆಯುತ್ತಲೇ ಇತ್ತು.
ಕೇಸಿನ ವಾಯಿದೆಯ ದಿನವಾದ ಅ. 10 ರಂದು ಹೈಕೋರ್ಟಿಗೆ ತನ್ನ ಹೇಳಿಕೆ ನೀಡಿದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ಕುಮಾರ್ ಕರಿಕ್ಕಳರವರು ” ಈ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಈ ಹಿಂದೆ ದೇವಸ್ಥಾನಕ್ಕೆ ವಂಚಿಸಿದ ಆರೋಪ ಇರುವವರಾದುದರಿಂದ ಹಾಗೂ ಉತ್ತರಾದಿಮಠದ ವಿಚಾರದಲ್ಲಿ ಹಾಗೂ ಸಂಪುಟ ನರಸಿಂಹ ಮಠದ ವಿಚಾರದಲ್ಲಿ ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವುದರಿಂದ ಈಗ ಆಡಳಿತ ನಡೆಸುತ್ತಿರುವ ಸಮಿತಿಯನ್ನು ವಜಾ ಮಾಡುವುದು ಒಳ್ಳೆಯದು ಎಂದು ಲಿಖಿತವಾಗಿ ತಿಳಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಹಿರಿಯ ವಕೀಲ ಎಂ ವೆಂಕಪ್ಪ ಗೌಡ
” ಮಹೇಶ್ ಕುಮಾರ್ ಕರಿಕ್ಕಳರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸೂಚನೆ ಮಾಡಲೂ ಜನವಿಲ್ಲದ ಕಾರಣ ಅಧ್ಯಕ್ಷರಾಗಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಾಗಿ ಕಮಿಟಿಯೇ ವಜಾಗೊಳ್ಳಲಿ ಎಂದು ಅವರು ಹೇಳಿಕೆ ನೀಡಿದ್ದಾರೆ ” ಎಂದು ತಾವು ನ್ಯಾಯಾಲಯಕ್ಕೆ ತಿಳಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.