ಸುಳ್ಯ: ಬಸ್ ಚಾಲಕನ ಮೇಲೆ ಹಲ್ಲೆ ಆರೋಪ; ದೂರು ದಾಖಲು

ಸುಳ್ಯ: ರಸ್ತೆ ಬದಿಯಲ್ಲಿ‌ ನಿಲ್ಲಿಸಿದ್ದ ಕಾರಿಗೆ ಕೆ.ಎಸ್.ಆರ್.ಟಿ.ಸಿ.‌ ಬಸ್ ತಾಗಿತೆಂಬ‌ ಕಾರಣಕ್ಕೆ ಸಿಟ್ಟುಕೊಂಡ ಕಾರಿನ ‌ಮಾಲಕರು ಬಸ್ ‌ಚಾಲಕನ ಮೇಲೆ ಹಲ್ಲೆ ನಡೆಸಿದರೆನ್ನಲಾದ ಘಟನೆ ವರದಿಯಾಗಿದ್ದು, ಆಸ್ಪತ್ರೆಗೆ ದಾಖಲಾದ ಬಸ್ ಚಾಲಕ ಕಾರಿನವರ ಮೇಲೆ ದೂರು ದಾಖಲಿಸಿರುವ ಘಟನೆ ವರದಿಯಾಗಿದೆ.

ಸೆ.9 ರಂದು ಸಂಜೆ ಕಡಬದಿಂದ‌ ಸುಳ್ಯಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ. ಬಸ್ ಸಂಜೆ 7.20ರ ಸುಮಾರಿಗೆ ಸುಳ್ಯದ ಹಳೆಗೇಟು ತಲುಪಿತು. ಅಲ್ಲಿ ಪ್ರಯಾಣಿಕರನ್ನು ಇಳಿಸಿ‌ ಮುಂದಕ್ಕೆ ಬಸ್ ಬರುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಬಸ್ ತಾಗಿತೆನ್ನಲಾಗಿದೆ. ಈ ವೇಳೆ ಬಸ್ ಚಾಲಕ ಎಚ್ಚೆತ್ತು ಬಸ್ಸನ್ನು ಸ್ವಲ್ಪ ದೂರ ಬಂದು‌ ನಿಲ್ಲಿಸಿದರೆನ್ನಲಾಗಿದೆ. ಕಾರಿಗೆ ಬಸ್ ತಾಗಿ ಕಾರು ಸ್ಕ್ಯ್ರಾಚ್ ಆಗಿದ್ದನ್ನು ನೋಡಿದ ಕಾರಿನ ಮಾಲಕ ಬಸ್ ಬಳಿ‌ ಹೋಗಿ ಚಾಲಕನನ್ನು ಪ್ರಶ್ನಿಸಿ ಹಲ್ಲೆ ನಡೆಸಿದರೆಂದು ಹೇಳಲಾಗುತ್ತಿದೆ.

ವಿಷಯ ತಿಳಿದು ಸುಳ್ಯ ಪೋಲೀಸರು ‌ಸ್ಥಳಕ್ಕಾಗಮಿಸಿ ಬಸ್ ಚಾಲಕನನ್ನು ಆಸ್ಪತ್ರೆಗೆ ಕಳುಹಿಸಿದರು. ಹಲ್ಲೆಗೊಳಗಾದ ಚಾಲಕ ಗುರುಪ್ರಸಾದ್ ರವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಕಾರು ಚಾಲಕ ಚಂದ್ರ ಕೋಲ್ಚಾರ್ ಮತ್ತಿತರರ ಮೇಲೆ ದೂರು ನೀಡಿದ್ದು, ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.