ಗುತ್ತಿಗಾರು: ದುಪ್ಪಟ್ಟು ಹಣ ಗಳಿಸುವ ಸುಲಭದಾಸೆಗೆ ಬಲಿಯಾದ ಗೃಹಿಣಿಯೊಬ್ಬರು, ಸೈಬರ್ ವಂಚಕರ ಮಾತಿಗೆ ಮರುಳಾಗಿ ಸ್ವಂತ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಸಂಸಾರದಿಂದ ಹೊರಬಿದ್ದು ತವರಿನಲ್ಲಿ ಆಶ್ರಯ ಪಡೆದಿರುವ ಆಘಾತಕಾರಿ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಈ ವರ್ಷದ ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್ಗೆ ‘ಏರ್ ಫಝ್’ ಎಂಬ ನಕಲಿ ಕಂಪೆನಿಯು ಕಳುಹಿಸಿದ್ದ ಲಿಂಕ್ ತೆರೆದಾಗ, ಮಹಿಳೆ ವಂಚಕರ ಜಾಲಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು. ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
ಇದನ್ನು ನಂಬಿದ ಮಹಿಳೆ, ಪ್ರಾಯೋಗಿಕವಾಗಿ 11,500 ರೂ. ಠೇವಣಿ ಮಾಡಿದರು. ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ 21,109 ರೂ. ಜಮೆಯಾಗಿದ್ದು, ಈ ಆರಂಭಿಕ ಯಶಸ್ಸೇ ಅವರನ್ನು ದೊಡ್ಡ ನಷ್ಟದ ಕೂಪಕ್ಕೆ ತಳ್ಳಿದೆ.
ಹೆಚ್ಚಿನ ಕಮಿಷನ್ ಆಸೆಗೆ ಬಿದ್ದ ಮಹಿಳೆ, ಹಂತಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸತೊಡಗಿದ್ದು, ಕೈಯಲ್ಲಿದ್ದ ಹಣ ಖಾಲಿಯಾದಾಗ, ಅವರ ಕಣ್ಣು ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಬಿತ್ತು. ಮನೆಯವರಿಗೆ ತಿಳಿಯದಂತೆ ಒಂದೊಂದೇ ಆಭರಣಗಳು ಮಾಯವಾಗತೊಡಗಿದವು. ಗಂಡನ ಚಿನ್ನ, ಗಂಡನ ತಂಗಿ (ಅತ್ತಿಗೆ) ಮತ್ತು ಭಾವನ ಆಭರಣಗಳು, ಕೊನೆಗೆ ತನ್ನ ಸ್ವಂತ ಒಡವೆಗಳನ್ನೂ ತೆಗೆದು ಅಡವಿಟ್ಟು ಹಣ ಪಡೆದರು. ಅಷ್ಟಕ್ಕೇ ನಿಲ್ಲಿಸದೆ, ಅತ್ತೆಯ ಬ್ಯಾಂಕ್ ಖಾತೆಯಿಂದ 69,000 ರೂ. ಹಣವನ್ನು ಕೂಡ ತೆಗೆದಿದ್ದರು.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವುದು ಕುಟುಂಬದವರಲ್ಲಿ ಆತಂಕ ಸೃಷ್ಟಿಸಿತು. ಕಳ್ಳತನವಾಗಿರಬಹುದೆಂದು ಭಾವಿಸಿದ ಕುಟುಂಬ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿತು. ವಿಪರ್ಯಾಸವೆಂದರೆ, ಕಳ್ಳತನದ ದೂರು ನೀಡಲು ತೆರಳಿದ ಕುಟುಂಬದೊಂದಿಗೆ ಈ ಮಹಿಳೆಯೂ ಜೊತೆಗೂಡಿ, ಏನೂ ಅರಿಯದವರಂತೆ ನಟಿಸಿದ್ದರು.
ಪೊಲೀಸರು ತನಿಖೆ ಆರಂಭಿಸಿದಾಗ, ಮನೆಯವರ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು. ಇದೇ ವೇಳೆ, ಮಹಿಳೆಯ ತವರು ಮನೆಯಲ್ಲಿ ಅವರ ತಂಗಿಯ 8 ಪವನ್ ಚಿನ್ನಾಭರಣಗಳೂ ಕಣ್ಮರೆಯಾಗಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತು. ಅನುಮಾನಗೊಂಡು ಮಹಿಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ಸತ್ಯ ಬಯಲಾಗಿದೆ.
ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು, ತಾನೇ ಎಲ್ಲಾ ಚಿನ್ನಾಭರಣಗಳನ್ನು ಕದ್ದು ಅಡವಿಟ್ಟು, ಒಟ್ಟು 11,21,863 ರೂಪಾಯಿಗಳನ್ನು ವಂಚಕರಿಗೆ ಕಟ್ಟಿರುವುದಾಗಿ ಮಹಿಳೆ ಕಣ್ಣೀರಿಡುತ್ತಾ ಒಪ್ಪಿಕೊಂಡರು. ವಂಚಕರು ಸುಮಾರು 2 ಲಕ್ಷ ರೂ. ಕಮಿಷನ್ ಕೊಟ್ಟಿದ್ದರೂ, ಅದನ್ನು ಕೂಡ ಮರುಠೇವಣಿ ಮಾಡಿ ಕಳೆದುಕೊಂಡಿರುವುದಾಗಿ ತಿಳಿಸಿದರು.
ಈ ಘಟನೆಯಿಂದ ಮಹಿಳೆಯ ಸಂಸಾರದಲ್ಲಿ ಬಿರುಗಾಳಿಯೇ ಎದ್ದಿದೆ. ನಂಬಿಕೆ ದ್ರೋಹದಿಂದ ಕುಪಿತಗೊಂಡ ಪತಿ, “ಅಡವಿಟ್ಟ ಚಿನ್ನ ಮತ್ತು ಹಣವನ್ನು ಮರಳಿಸದ ಹೊರತು ಮನೆಗೆ ಕಾಲಿಡಬೇಡ” ಎಂದು ತಾಕೀತು ಮಾಡಿದ್ದಾರೆ. ಪರಿಣಾಮ, ಮಹಿಳೆ ಇದೀಗ ತನ್ನ ತವರು ಮನೆ ಸೇರಿದ್ದಾರೆ.
ತನ್ನ ತಪ್ಪಿನ ಅರಿವಾಗಿರುವ ಮಹಿಳೆ, ಇದೀಗ ಚಿನ್ನ ಬಿಡಿಸಲು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ದುಡಿದು ಹಣ ಮರಳಿಸುವ ಪ್ರಯತ್ನದಲ್ಲಿದ್ದಾರೆ. ಎರಡು ತಿಂಗಳ ಹಿಂದೆಯೇ ಮಂಗಳೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.