ಸುಬ್ರಹ್ಮಣ್ಯ: ಕಾಡುಹಂದಿ ಮಾಂಸ ನೀಡುವುದಾಗಿ ವಂಚಿಸುತ್ತಿದ್ದಾತ ಸಿಕ್ಕಿಬಿದ್ದ

ಸಮಗ್ರ ನ್ಯೂಸ್: ಕಾಡು ಹಂದಿಯ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಎ.೧೫ ರಂದು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದಿದೆ.

ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಕಾಡು ಹಂದಿ ಉರುಳಿಗೆ ಬಿದ್ದಿದ್ದು ಮಾಂಸ ಬೇಕಾದರೆ ಹೇಳಿ ಎಂದು ಈತ ಹೇಳಿದ್ದ ಎನ್ನಲಾಗಿದ್ದು, ಈ ವೇಳೆ ಮಹಿಳೆಯು ನಿರಾಕರಿಸಿ ಅಲ್ಲಿನ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಈ ಸಂದರ್ಭ ಈ ಹಿಂದೆ ಹಣ ನೀಡಿ ಈತನಿಂದಲೇ ಮೋಸ ಹೋದ ವ್ಯಕ್ತಿಯೊಬ್ಬರು ಎದುರಾಗಿದ್ದು ಈತನನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ಈತ ಕಡಬ ತಾಲೂಕಿನ ಮರ್ದಾಳದ ವ್ಯಕ್ತಿ ಎಂದು ತಿಳಿದು ಬಂದಿದ್ದು ಹಲವರಿಗೆ ವಿವಿಧ ರೀತಿಯಲ್ಲಿ ವಂಚಿಸಿರುವುದು ತಿಳಿದು ಬಂದಿದೆ. ದೂರು ನೀಡಲು ಯಾರು ಮುಂದೆ ಬಾರದ ಕಾರಣ ಆತನನ್ನು ವಿಚಾರಿಸಿ ಬಿಟ್ಟಿರುವುದಾಗಿ ಸುಬ್ರಹ್ಮಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ .

ಅಲ್ಲದೆ ಈತ ಕಟ್ಟಿಗೆ ಇದೆ ಎಂದು ಹೇಳಿ ಕುಲ್ಕುಂದ ಭಾಗದಲ್ಲಿಯೂ ಮುಂಗಡ ಹಣ ಪಡೆದಿದ್ದ ಎನ್ನಲಾಗಿದೆ. ಸದ್ಯ ಈತನ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದು ಮೋಸ ಹೋಗದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.