ಸರಣಿ ರಜೆ ಹಿನ್ನೆಲೆ| ಕುಕ್ಕೆಯಲ್ಲಿ ಜನಜಾತ್ರೆ

ಸುಬ್ರಹ್ಮಣ್ಯ: ಸರಣಿ ರಜೆಗಳ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು. ಬೇಸಿಗೆ ರಜೆಯೊಂದಿಗೆ ಸರಣಿ ರಜೆ ಇದ್ದುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಶನಿವಾರ, ಭಾನುವಾರವೂ ಕ್ಷೇತ್ರದಲ್ಲಿ ಭಕ್ತ ದಟ್ಟಣೆ ಹೆಚ್ಚಾಗಿತ್ತು. ವಿಷು ಹಬ್ಬದ ಪ್ರಯುಕ್ತ ಉತ್ಸವ ಇದ್ದುದರಿಂದ ಉತ್ಸವದ ಬಳಿಕ ಸೇವೆಗಳು ಆರಂಭವಾದವು.

ಮಹಾಪೂಜೆ, ಆಶ್ಲೇಷ ಬಲಿ ಪೂಜೆ, ನಾಗಪ್ರತಿಷ್ಠೆ, ಅಭಿಷೇಕ, ಶೇಷಸೇವೆ, ಕಾರ್ತಿಕ ಪೂಜೆ, ತುಲಾಭಾರ ಸೇವೆಗಳನ್ನು ಭಕ್ತರು ನೆರವೇರಿಸಿದರು. ದೇಗುಲದ ಒಳಾಂಗಣ, ಹೊರಾಂಗಣ, ರಥಬೀದಿ, ಕುಮಾರಧಾರಾ ಸ್ನಾನಘಟ್ಟದಲ್ಲಿ ಜನ ದಟ್ಟಣೆ ಇತ್ತು.

ಷಣ್ಮುಖ ಪ್ರಸಾದ ಭೋಜನ ಶಾಲೆಯೊಂದಿಗೆ ಆದಿ ಸುಬ್ರಹ್ಮಣ್ಯದಲ್ಲೂ ಭೋಜನ ವ್ಯವಸ್ಥೆ ಮಾಡಲಾಗಿತ್ತು.