ಜಾಲ್ಸೂರು: ಕನಕಮಜಲು ಗ್ರಾಮದ ಅರಣ್ಯದ ಗಡಿಭಾಗದ ಕೊರಂಬಡ್ಕ ಕುದ್ಕುಳಿ, ಕಾಪಿಲ, ದೇರ್ಕಜೆ ಭಾಗಗಳಲ್ಲಿ ಕಾಡಾನೆಗಳು ಕೃಷಿ ನಾಶ ಪಡಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕನಕಮಜಲು ಗ್ರಾಮವು ಕೇರಳದ ಕಾಸರಗೋಡು ತಾಲ್ಲೂಕಿನ ದೇಲಂಪಾಡಿ ಗ್ರಾಮದ ಗಡಿಭಾಗವಾಗಿದ್ದು, ದೇಲಂಪಾಡಿ ಭಾಗದಿಂದ ಆನೆಗಳು ಕರ್ನಾಟಕ ಗಡಿ ಗ್ರಾಮವಾದ ಕನಕಮಜಲು ಭಾಗಕ್ಕೆ ಬಂದು ಕೃಷಿ ನಾಶ ಮಾಡುತ್ತಿವೆ.
ಈ ಭಾಗದ ರೈತರ ಅಡಿಕೆ, ತೆಂಗು, ಬಾಳೆ, ರಬ್ಬರ್ ಕೃಷಿಗೆ ಹಾನಿ ಮಾಡುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕನಕಮಜಲು ಗ್ರಾಮದ ಅರಣ್ಯದ ಅಂಚಿನ ಗಡಿಭಾಗಗಳಲ್ಲಿ ಆನೆ ಕಂದಕ, ವಿದ್ಯುತ್ ಬೇಲಿಯನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕನಕಮಜಲು ಗ್ರಾಮದ ಕೇರಳ ಗಡಿಭಾಗದಲ್ಲಿ ಸುಮಾರು 10 ಕಿ.ಮೀ. ವರೆಗೆ ವಿದ್ಯುತ್ ಬೇಲಿ ಹಾಗೂ ಆನೆ ಕಂದಕವನ್ನು ರಚಿಸುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಕೃಷಿಕರ ಬವಣೆ ಅರಿತು ಸರ್ಕಾರವು ಕ್ರಮ ಕೈಗೊಳ್ಳಬೇಕು. ಕೃಷಿ ನಷ್ಟ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಕುದ್ಕುಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಉಗ್ಗಮೂಲೆ ಅವರ ನೇತೃತ್ವದಲ್ಲಿ ಪುತ್ತೂರು ವಲಯ ಅಧಿಕಾರಿ ಕಿರಣ್ ಮೂಲಕ ಮನವಿ ಸಲ್ಲಿಸಲಾಯಿತು.
ಗ್ರಾಮಸ್ಥರಾದ ಹರೀಶ್ ಮೂರ್ಜೆ, ಹೇಮಂತ್ ಮಠ, ಜಗನ್ನಾಥ ಮಾಣಿ ಮಜಲು, ನಾರಾಯಣ ಬೊಮ್ಮೆಟ್ಟಿ, ಈಶ್ವರ ಕೊರಂಬಡ್ಕ, ಲೋಹಿತ್ ಕುದ್ಕುಳಿ, ವಿಶ್ವನಾಥ ಕಣಜಾಲು, ಗಂಗಾಧರ ಕಣಜಾಲು, ಲಕ್ಷ್ಮೀನಾರಾಯಣ ಸಾರ ಕೂಟೇಲು, ಅಚ್ಚುತ ಉಗ್ಗಮೂಲೆ, ತೀರ್ಥರಾಮ ಕುತ್ಯಾಳ, ವಿನ್ಯಾಶ್ ಕಣಜಾಲು, ಪ್ರದೀಪ್ ಕಾಪಿಲ, ಭಾಸ್ಕರ ಉಗ್ಗಮೂಲೆ, ಅವಿನ್ ಮಳಿ, ಲತಾ ಸಾರಕೂಟೇಲು, ಪದ್ಮನಾಭ ಕೊ೦ರ್ಬಡ್ಕ ಭಾಗವಹಿಸಿದ್ದರು.