ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ತೃತೀಯ ಕಲಾ ಪದವಿಯ ಆಯೋಜನೆಯಲ್ಲಿ ಮಂಗಳೂರು ವಿ.ವಿ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಟ್ಸ್ ಫೆಸ್ಟ್ ಮಾ.24 ರಂದು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಮಾಡಿದ ಧ್ವನಿ ಫೌಂಡೇಶನ್ ಮೈಸೂರು ಇದರ ಸ್ಥಾಪಕರಾದ ಡಾ. ಶ್ವೇತಾ ಮಡಪ್ಪಾಡಿ ಇವರು ಮಾತನಾಡಿ ಕರಾವಳಿ ಪ್ರದೇಶದ ಶುದ್ಧ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದ್ದು,ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಪೀಳಿಗೆ ತೊಡಗಿಸುವಂತಾಗಲು ಇಂತಹ ಕಾರ್ಯಕ್ರಮಗಳು ಉತ್ತೇಜನಕಾರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ವಿ ಜೆ ವಿಖ್ಯಾತ್ ಯೂ ಟ್ಯೂಬ್ ಚಾನೆಲ್ ನ ಸ್ಥಾಪಕರಾದ ವಿ.ಜೆ.ವಿಖ್ಯಾತ್ ಅವರು ಮಾತನಾಡಿ ವಿದ್ಯಾಭ್ಯಾಸದೊಂದಿಗೆ ವಿವಿಧ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಡಾ.ರವಿಕಕ್ಕೆಪದವು,ಸುಬ್ರಹ್ಮಣ್ಯ ದೇವಳದ ಜಾತ್ರೆ ಸಂದರ್ಭದಲ್ಲಿ ಬ್ರಹ್ಮರಥ ಕಟ್ಟುವ ಮಲೆಕುಡಿಯ ಜನಾಂಗದ ಹಿರಿಯರಾದ ಶ್ರೀ ತನಿಯಪ್ಪ ಮುಂಡೊಕಜೆ ,ಮಂಗಳೂರು ವಿ.ವಿ ಯ ಸಮಾಜಕಾರ್ಯ ವಿಷಯದ ಸ್ನಾತಕೋತ್ತರ ಪದವಿಯಲ್ಲಿ 3ನೇ ರಾಂಕ್ ಪಡೆದಿರುವ ಕೆ.ಎಸ್.ಎಸ್.ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ಕು.ಅರ್ಪಿತಾ ಮತ್ತು ಭಾರತೀಯ ರಕ್ಷಣಾ ಸೇನೆಗೆ ಆಯ್ಕೆಯಾಗಿ ಸೇವೆಸಲ್ಲಿಸುತ್ತಿರುವ ಪೂರ್ವ ವಿದ್ಯಾರ್ಥಿಯಾದ ರಂಜಿತ್ ಇವರುಗಳನ್ನು ಡ್ರೀಮ್ಸ್2ಕೆ25 ಆರ್ಟ್ಸ್ ಫೆಸ್ಟ್ ನ ಅಂಗವಾಗಿ ಸನ್ಮಾನಿಸಲಾಯಿತು.
ಕಾಲೇಜಿನ ಮಾನವಿಕ ಸಂಘದ ಸಂಯೋಜಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಉದಯಕುಮಾರ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.ಕಾಲೇಜಿನ ಪ್ರಾಚಾರ್ಯರಾದ ಡಾ.ದಿನೇಶ.ಪಿ.ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಲತಾ.ಬಿ.ಟಿ ಶುಭಹಾರೈಸಿದರು. ತೃತೀಯ ಬಿ.ಎ.ಯ ಶೈಕ್ಷಣಿಕ ಸಲಹೆಗಾರರು ಮತ್ತು ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥರಾದ ಸ್ವಾತಿ ವಂದನಾರ್ಪನೆಗೈದರು.