ಜಾಲ್ಸೂರು: ಕಾಳುಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು

ಕಾಳುಮೆಣಸು ಕೊಯ್ಯುವ ವೇಳೆ ಆಯತಪ್ಪಿ ಬಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕನಕಮಜಲು ಗ್ರಾಮದ ಕೊಲ್ಲಂತಡ್ಕ ಎಂಬಲ್ಲಿ ಜ.27ರಂದು ಸಂಭವಿಸಿದೆ.

ಕನಕಮಜಲು ಗ್ರಾಮದ ಕೊಲ್ಲಂತಡ್ಕದ ಜಗನ್ನಾಥ ಅವರು ತಮ್ಮ ಮನೆಯ ಅಂಗಳದಲ್ಲಿದ್ದ ಮರದಲ್ಲಿ ಕಾಳುಮೆಣಸು ಕೊಯ್ಯಲು ಏಣಿ ಇರಿಸಿ, ಹತ್ತಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ನಂತರ ಮನೆಯವರು ವಾಹನದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆತಂದರೆನ್ನಲಾಗಿದೆ. ಆದರೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರೆಂದು ತಿಳಿದುಬಂದಿದೆ.

ಜಗನ್ನಾಥ ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನೀಲಾವತಿ, ಪುತ್ರರಾದ ರಮೇಶ, ಶಶಿಧರ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.