ಗುತ್ತಿಗಾರು. ಜ.18: ಪತ್ನಿಯನ್ನು ಗುಂಡಿಕ್ಕಿ ಕೊಲೆಗೈದು ಪತಿ ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನೆಲ್ಲೂರು ಕೇಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ.17ರ ರಾತ್ರಿ ಸಂಭವಿಸಿದೆ. ಮೃತರನ್ನು ರಾಮಚಂದ್ರ ಅಲಿಯಾನ್ ಚಂದ್ರ (54) ಹಾಗೂ ಆತನ ಪತ್ನಿ ವಿನೋದ(43) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಮೃತ ರಾಮಚಂದ್ರ ಕಳೆದ ರಾತ್ರಿ ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣಗಳಿಗೆ ಕುಟುಂಬಸ್ಥರ ಜೊತೆಗೆ ತಗಾದೆ ತೆಗೆದಿದ್ದಾನೆ. ಬಳಿಕ ಗಲಾಟೆ ವಿಪರೀತವಾಗಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ತಾನು ಪರವಾನಗಿ ಹೊಂದಿದ ಕೋವಿಯಿಂದ ಹಿರಿಯ ಮಗ ಪ್ರಶಾಂತ್ ಗೆ ಗುರಿಯಿಟ್ಟಿದ್ದು ಇದನ್ನು ತಪ್ಪಿಸಲು ಪತ್ನಿ ವಿನೋದ ಕೋವಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕೋವಿಯನ್ನು ರಾಮಚಂದ್ರರು ಪತ್ನಿ ವಿನೋದ ಮೇಲೆ ಗುರಿಯಿರಿಸಿ ಗುಂಡಿಕ್ಕಿದ್ದು, ಘಟನೆಯಿಂದ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಬಳಿಕ ಪತಿ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ಮಗ ಪ್ರಶಾಂತ್ ಹೇಳಿಕೆಯಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮಹಜರು ನಡೆಸಿ ಮೃತದೇಹಗಳನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಿದ್ದಾರೆ.
ಮೃತರು ತಂದೆ ರಾಮಣ್ಣ ಗೌಡ ಸೂಂತೋಡು, ತಾಯಿ ಕುಸುಮ, ಮಕ್ಕಳಾದ ಪ್ರಶಾಂತ್, ನಿಶಾಂತ್, ರಂಜಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಸ್ವಂತ ತಂದೆ – ತಾಯಿಯಂತೆ ನೋಡಿಕೊಳ್ಳುತ್ತಿದ್ದ ವಿನೋದ: ಮೃತ ವಿನೋದಾ ರಾಮಚಂದ್ರರ ವೃದ್ದ ತಂದೆ ತಾಯಿಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಮೂವರು ಮಕ್ಕಳನ್ನು ಹೊಂದಿದ್ದ ಈ ಕುಟುಂಬಕ್ಕೆ ಆರ್ಥಿಕ ಕೊರತೆ ಏನೂ ಇರಲಿಲ್ಲ. ಆದರೆ ವಿಪರೀತ ಕುಡಿತ ಹಾಗೂ ನಿರಂತರ ಕೌಟುಂಬಿಕ ಕಲಹಗಳು ಇಂದು ಈ ಘಟನೆಗೆ ಸಾಕ್ಷಿಯಾಗಿವೆ. ರಾಮಚಂದ್ರ ಕೂಡಾ ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದು ಮನೆಯಲ್ಲಿ ಮಾತ್ರ ಸರಿಹೊಂದುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.