ಬೆಳ್ಳಾರೆ: ಸಹಕಾರಿ ಸಂಘದ ಚುನಾವಣೆ ವೇಳೆ ಕೈ ಮಿಲಾಯಿಸಿಕೊಂಡ ಇತ್ತಂಡಗಳು

ಬೆಳ್ಳಾರೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಬುಧವಾರ ಚುನಾವಣೆ ನಡೆದಿದ್ದು, ಈ ನಡುವೆ ಎರಡು ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿತರು ತಮ್ಮ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಇರುವಂತಹ ಚೀಟಿಗಳನ್ನು ಮತ ಚಲಾಯಿಸಲು ಬರುತ್ತಿದ್ದವರಿಗೆ ನೀಡುತ್ತಿದ್ದರು.

ಈ ವೇಳೆ ಒಂದು ಪಕ್ಷದವರು ನೀಡಿದ ಚೀಟಿಯನ್ನು ಇನ್ನೊಂದು ಪಕ್ಷದವರು ಹಿಂದೆಗೆದುಕೊಂಡು ಅವರ ಪಕ್ಷದ ಅಭ್ಯರ್ಥಿಗಳ ಚಿಹ್ನೆಯ ಪಟ್ಟಿಯನ್ನು ನೀಡಿದ್ದರೆಂಬ ಕಾರಣಕ್ಕೆ ಎರಡೂ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಒಂದಿಬ್ಬರು ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ. ಪ್ರಚಾರದ ಸಂದರ್ಭದಲ್ಲಿ ಮುಖಂಡರೋರ್ವರು ಹೇಳಿದ್ದರೆನ್ನಲಾದ ಮಾತು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಹಿರಿಯರು ಜಗಳವನ್ನು ಬಿಡಿಸಿದರು. ಬಳಿಕ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಬಂದೋಬಸ್ತ್ ಕಲ್ಪಿಸಿದರು.