ಎಲಿಮಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ, ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಸಂಧ್ಯಾ ಕೆ ವಹಿಸಿದ್ದರು.
ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರು ದೀಪ ಪ್ರಜ್ವಲಿಸಿ ಮಾತನಾಡುತ್ತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿದೆ, ಮಹಿಳೆಯರು ಸಬಲೀಕರಣರಾಗಿದ್ದಾರೆ. ಯೋಜನೆಯಿಂದ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಮಕ್ಕಳು ಸರಿ ದಾರಿಗೆ ಬಂದು ಉತ್ತಮವಾದ ಶಿಕ್ಷಣವನ್ನು ಪಡೆದು, ಒಳ್ಳೆಯ ಜೀವನ ನಡೆಸಿಕೊಂಡು ಹೋಗಲು ಧರ್ಮಸ್ಥಳದ ಪೂಜ್ಯರು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಪ್ರತಿ ಶಾಲೆಗಳಲ್ಲಿ ಹಮ್ಮಿಕೊಂಡು ಬಂದಿದ್ದಾರೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮವಾದ ಶಿಕ್ಷಣವನ್ನು ಪಡೆಯಿರಿ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ ಮಾತನಾಡಿ, ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದು ಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳತ್ತಾ ಬಂದಿದೆ. ಶಾಲಾ ವಿದ್ಯಾರ್ಥಿಗಳು ದುಶ್ಚಟಕ್ಕೆ ಬೀಳಬಾರದು ಎಂಬ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹದಿಹರೆಯ ಮಕ್ಕಳಲ್ಲಿ ಬೇರೆ ಬೇರೆ ವಿಧಗಳಲ್ಲಿ ದುಶ್ಚಟಗಳು ಕಂಡು ಬರುತ್ತದೆ. ಮಾದಕ ವಸ್ತುಗಳಾದ ದೂಮಪಾನ, ಮದ್ಯಪಾನ, ಡ್ರಗ್ಸ್ ಮುಂತಾದ ಮದ್ಯವ್ಯಸನಿಗಳಿಗೆ ತುತ್ತಾಗಿ ಮಕ್ಕಳು ಕೆಟ್ಟ ದಾರಿಗೆ ಬೀಳುತ್ತಾರೆ. ಇದರಿಂದ ಮಕ್ಕಳ ಅರೋಗ್ಯ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕಾದರೆ ಉತ್ತಮವಾದ ನಡತೆಯನ್ನು ಹೊಂದಿರಬೇಕು. ಪೋಷಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತನ್ನು ಕೊಡಬೇಕು. ಸಂಸ್ಕಾರ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳು ಪ್ರತಿನಿತ್ಯ ಯೋಗಾಸನವನ್ನು ಮಾಡಬೇಕು ಎಂದು ಹೇಳಿದರು.
ಜನಜಾಗೃತಿ ವಲಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿರವರು ಮಾತನಾಡಿ, ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಅನೇಕ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದೇವೆ. ಮಕ್ಕಳು ಉತ್ತಮವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು, ಮುಂದಿನ ಜೀವನದಲ್ಲಿ ಉತ್ತಮ ಪ್ರಜೆಯಾಗಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತ ಬಂದಿದ್ದೇವೆ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಜನಜಾಗೃತಿ ಸದಸ್ಯರಾದ ಬಾಬು ಗೌಡ ಅಚ್ರಪ್ಪಾಡಿರವರು ಶಾಲಾ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಧನಂಜಯ ಬಾಳೆತೋಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಅಂಬೆಕಲ್ಲು, ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷರಾದ ಬಾನುಪ್ರಕಾಶ್ ತಳೂರು, ದೇವಚಳ್ಳ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಸೇವಾಪ್ರತಿನಿಧಿ ಉಷಾಲತಾ, ಶಾಲಾ ಶಿಕ್ಷಕರು, ಮಾವಿನಕಟ್ಟೆ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದರು. ಶಿಕ್ಷಕ ವಸಂತರವರು ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ನಿರೂಪಿಸಿದರು. ಶಿಕ್ಷಕ ಮುರಳಿ ಪುನುಕುಟ್ಟಿರವರು ವಂದಿಸಿದರು.