ಸುಳ್ಯ: ಸರ್ಕಾರದ ಅಕ್ರಮ-ಸಕ್ರಮ ಯೋಜನೆಯ ಷರತ್ತುಗಳನ್ನು ಸಡಿಲಿಸಿ ಯೋಜನೆಯ ಪ್ರಯೋಜನಗಳಿಂದ ರೈತರು ವಂಚಿತರಾಗದಂತೆ ಸರ್ಕಾರಕ್ಕೆ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗಾರು ಪ್ರಾ.ಕೃ.ಪ ಸಂಘದ ನಿರ್ದೇಶಕ ಮುಳಿಯ ಕೇಶವ ಭಟ್ ಸಂಸದ ಬ್ರಿಜೇಶ್ ಚೌಟ, ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಅವರು ಈ ಮನವಿ ಸಲ್ಲಿಸಿದ್ದು, ಸುಳ್ಯ ತಾಲೂಕಿನ ಹಲವಾರು ರೈತರು ಸರಕಾರಿ ಜಮೀನಿನಲ್ಲಿ ಕೃಷಿ-ಕೃತಾವಳಿಗಳನ್ನು ಮಾಡಿ ಸರಕಾರದ ಅಕ್ರಮ-ಸಕ್ರಮ ಯೋಜನೆಯಂತೆ ನಮೂನೆ-57 ರ ಅಡಿ ಅರ್ಜಿ ಸಲ್ಲಿಸಿ ಮಂಜೂರಾತಿಗೆ ಕಾಯುತ್ತಿದ್ದಾರೆ. ಆದರೆ ಅಧಿಕಾರಿಗಳು ಸಲ್ಲಿಸಲಾದ ಅರ್ಜಿಗಳ ಸ್ಥಳ ಪರಿಶೀಲನೆ ಮಾಡದೇ ವಿವಿಧ ಕಾರಣಗಳನ್ನು ನೀಡಿ ಅರ್ಜಿ ತಿರಸ್ಕರಿಸುವಂತೆ ಡಿಸಿಗೆ ವರದಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಸದ್ರಿ ತಿರಸ್ಕರಿಸಿರುತ್ತಾರೆ. ಆದ್ದರಿಂದ ನೀಡಲಾದ ಷರತ್ತುಗಳನ್ನು ಮರುಪರಿಶೀಲನೆ ನಡೆಸಿ ಸಡಿಲಿಸುವಂತೆ ಮುಳಿಯ ಕೇಶವ ಭಟ್ ಮನವಿ ಮಾಡಿದ್ದಾರೆ.
ಹಾಗಾದರೆ ಅರ್ಜಿಗಳು ಯಾಕೆ ತಿರಸ್ಕೃತವಾಗಿದೆ ಎಂಬ ಕಾರಣಗಳನ್ನು ನೋಡುವುದಾದರೆ,
1) ಅರ್ಜಿದಾರರು 01-01-2002 ಕ್ಕೆ 18 ವರ್ಷ ವಯಸ್ಸಿನವರಾಗಿಲ್ಲ.
2) ಅರ್ಜಿದಾರರು (ನಮೂನೆ-50.53 ರಡಿ ಅರ್ಜಿ ಸಲ್ಲಿಸಿ ಕೃತಾವಳಿ ಮಾಡಿರುವ ಜಮೀನು ಮಂಜೂರಾಗದೇ ಇದ್ದರೂ) ನಮೂನೆ 50, 53 ರಲ್ಲಿ ಅರ್ಜಿಸಲ್ಲಿಸಿರುತ್ತಾರೆ ಎಂಬುದು.
3) ಕೃತಾವಳಿ ಮಾಡಿರುವ ಜಮೀನು ಕುಮ್ಮಿ, ಕಾನ, ಬಾಣೆ ಡೀಮ್ಸ್ ಅರಣ್ಯ ವ್ಯಾಪ್ತಿಯಲ್ಲಿ ಬರುವ ಕಾರಣ ಎಂದೂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.
ಇದರಿಂದಾಗಿ ಕೃಷಿಯಿಂದಲೇ ಜೀವನ ನಡೆಸುತ್ತಿರುವ ಅದೆಷ್ಟೋ ರೈತರಿಗೆ ಅನ್ಯಾಯವಾಗುತ್ತಿದೆ. ಕುಮ್ಮಿ-ಕಾನ, ಬಾಣೆ ಜಮೀನುಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದೂ ಹೇಳುತ್ತಿದ್ದರೂ ನಮೂನೆ-50, 53ರ ಅಡಿ ಮಂಜೂರಾದ ಎಷ್ಟೋ ಉದಾಹರಣೆಗಳಿವೆ. ಆದುದರಿಂದ ತಾವುಗಳು ನಿಯಮಗಳನ್ನು ಈ ಕೆಳಗಿನಂತೆ ಸಡಿಲಿಸಿ ರೈತರಿಗೆ ಅನುಕೂಲವಾಗುವಂತೆ ಬದಲಾವಣೆ ತರಬೇಕಾಗಿ ಅವರು ಸರ್ಕಾರವನ್ನು ವಿನಂತಿಸಿದ್ದಾರೆ.