ಬಳ್ಪ: ಮನೆಗೆ ನುಗ್ಗಿ‌ ನಗನಗದು ದರೋಡೆ

ಬಳ್ಪ: ಮನೆಯೊಂದಕ್ಕೆ ನುಗ್ಗಿದ ಕಳ್ಳರು 12 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ಹು ದರೋಡೆಗೈದ ಘಟನೆ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಸುಮಾರು ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತನವಾಗಿರುವ ಘಟನೆ ಅ. 20ರಂದು ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಅಂದಾಜು 6 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪುತ್ತೂರು ಸಮೀಪದ ಪೆರಿಗೇರಿಗೆ ಹೋಗಿದ್ದರು.

ಅ.20ರಂದು ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ರೂ. 12 ಲಕ್ಷ ಮತ್ತು 28 ಪವನ್ ಚಿನ್ನ ಕಾಣೆಯಾಗಿರುವುದು ತಿಳಿಯಿತು. ಕರಿಮಣಿ ಸರವೊಂದರ ತಾಳಿಯನ್ನು ಬಿಚ್ಚಿಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.