ಮರ್ಕಂಜ: ಕಾಣೆಯಾಗಿದ್ದ ಮಹಿಳೆಯ ಶವ ಬಾವಿಯಲ್ಲಿ ಪತ್ತೆ

ಮರ್ಕಂಜ: ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಶನಿವಾರ (ಸೆ.28) ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಮಿತ್ತಡ್ಕದ ಮೋಹನ ಅವರ ಪತ್ನಿ ಶೋಭಾಲತಾ (35) ಅವರು ಸೆ. 24ರಂದು ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲು ಆರಂಭಿಸಲಾಗಿತ್ತು.

ಆರಂಭದಲ್ಲಿ ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಬಾವಿಯ ಒಳ ಭಾಗದಲ್ಲಿ ಮಣ್ಣು ಕುಸಿಯ ತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು ಹುಡುಕತೊಡಗಿದರು. ಕ್ಯಾಮರಾ ಇಳಿಸಿಯೂ ಶೋಧಿಸಲಾಯಿತು. ಆದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಮಹಿಳೆ ಬಾವಿಯಲ್ಲೇ ಇರುವ ಸಂಶಯ ದೃಢವಾದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರ ಸಹಕಾರದಿಂದ ತಹಸೀಲ್ದಾರರ ಸೂಚನೆಯಂತೆ ಬಾವಿಯನ್ನು ಒಂದು ಕಡೆಯಿಂದ ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕೆಲಸವನ್ನು ಶುಕ್ರವಾರ ಬೆಳಗ್ಗಿನಿಂದ ಆರಂಭಿಸಲಾಯಿತು. ಶನಿವಾರ ಮಣ್ಣು ತೆಗೆದ ಬಳಿಕ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದವರು ಬಾವಿಯೊಳಗೆ ಇಳಿದು ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.