ಗೂನಡ್ಕ: ಕಂಟೈನರ್ – ಸ್ಕೂಟಿ ನಡುವೆ ಡಿಕ್ಕಿ; ಸವಾರ ಗಂಭೀರ

ಅರಂತೋಡು: ಕಂಟೈನರ್ ಲಾರಿ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೆ. 24 ರಂದು ಮಾಣಿ – ಮೈಸೂರು ರಾ.ಹೆದ್ದಾರಿಯ ಗೂನಡ್ಕದಲ್ಲಿ ಸಂಭವಿಸಿದೆ.

ಗಾಯಾಳುವನ್ನು ಕಾಸರಗೋಡು ನಿವಾಸಿ ಮಹಮ್ಮದ್ ಜಮೀರ್ ಎಂದು ಗುರುತಿಸಲಾಗಿದೆ. ಇವರು ಎಮ್ಮೆಮಾಡಿನಿಂದ ಕಾಸರಗೋಡಿಗೆ ಹಿಂದಿರುಗಿ ತಮ್ಮ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಗೂನಡ್ಕದ ಶಿರಾಡಿ ದೈವಸ್ಥಾನದ ಸಮೀಪ ಮುಖ್ಯರಸ್ತೆಯಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಬೈಕ್ ಸವಾರ ಜಮೀರ್ ಅವರ ಮುಖ, ಕೈ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ತೆರಳಿ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.