ಮಡಪ್ಪಾಡಿ: ತೆಂಗಿನಕಾಯಿ ಹೆಕ್ಕಲು ತೋಟಕ್ಕೆ ಹೋಗಿದ್ದಾಗ ಕೆರೆಗೆ ಜಾರಿ ಬಿದ್ದು ಕೃಷಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಡಪ್ಪಾಡಿಯಿಂದ ವರದಿಯಾಗಿದೆ. ಗ್ರಾಮದ ವಿಶ್ವನಾಥ ಗೋಳ್ಯಾಡಿ ಎಂಬವರೇ ಮೃತ ದುರ್ದೈವಿ.
ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಶ್ವನಾಥರವರು ತೆಂಗಿನಕಾಯಿ ಹೆಕ್ಕಲೆಂದು ತೋಟಕ್ಕೆ ಹೋಗಿದ್ದರೆನ್ನಲಾಗಿದೆ. ಮಧ್ಯಾಹ್ನದವರೆಗೆ ಅವರು ಬಾರದಿದ್ದ ಕಾರಣ ಮನೆಯವರು ತೋಟದಲ್ಲಿ ಹುಡುಕಾಟ ನಡೆಸಿದ ವೇಳೆ ತೆಂಗಿನಕಾಯಿ ತರಲೆಂದು ತೆಗೆದುಕೊಂಡು ಹೋಗಿದ್ದ ಕೈಗಾಡಿ ಕೆರೆಯ ಬಳಿ ಕಂಡುಬಂದಿದೆ.
ಪರಿಶೀಲಿಸಿದಾಗ ಪಕ್ಕದ ಕೆರೆಯಲ್ಲಿ ನೋಡಿದಾಗ ವಿಶ್ವನಾಥರ ದೇಹ ತೇಲುತ್ತಿರುವುದು ಕಂಡುಬಂತೆನ್ನಲಾಗಿದೆ. ಬಳಿಕ ಸ್ಥಳೀಯರು ಸೇರಿ ದೇಹವನ್ನು ಮೇಲಕ್ಕೆತ್ತಿದರೂ ಅದಾಗಲೇ ಕೊನೆಯುಸಿರೆಳೆದಿದ್ದರೆಂದು ತಿಳಿದು ಬಂದಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.