ಸಂಪಾಜೆ: ಕೃಷಿಕರ ನಿದ್ದೆಗೆಡಿಸಿದ ಕಾಡಾನೆ ಹಿಂಡು| ಹಲವರ ಕೃಷಿ ನಾಶ

ಸಂಪಾಜೆ: ಗಡಿಗ್ರಾಮ ಸಂಪಾಜೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಡಾನೆ ಹಿಂಡು ದಾಳಿ ನಡೆಸುತ್ತಿದ್ದು, ಕೃಷಿಗೆ ಹಾನಿ ಸಂಭವಿಸಿದೆ.

ದೇವರಗುಂಡ ಶೇಷಪ್ಪ, ಚಂದ್ರ ಶೇಖರ ಮತ್ತು ಚಡಾವಿನ ಹರೀಶ ಸೇರಿದಂತೆ ಹಲವು ಕೃಷಿಕರ ತೋಟಗಳಿಗೆ ಶುಕ್ರವಾರದಿಂದ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಗಿಡಗಳ ಹಾನಿ ಸಹಿತ ಅಪಾರ ಕೃಷಿ ನಾಶ ಮಾಡಿದೆ.

ಕೊಡಗು ವ್ಯಾಪ್ತಿಯ ಕಾಡಿನಿಂದ ರಬ್ಬರ್‌ ತೋಟದ ಮೂಲಕ ಇಳಿದು ಸಂಪಾಜೆ-ಕೊಡಗಿನ ನದಿಯನ್ನು ದಾಟಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿದೆ. ಅಡಿಕೆ, ಬಾಳೆಗಿಡಗಳನ್ನು ನಾಶಪಡಿಸುತ್ತಿವೆ. ಇಲ್ಲಿ ಬಿದಿರು ಮತ್ತು ಈಚಲು ಮರ ಕೂಡ ಹೆಚ್ಚು ಇರುವುದರಿಂದ ಇವುಗಳಿಗಾಗಿ ದಾಳಿ ನಡೆಸುತ್ತಿವೆ. ಮೂರು ವರ್ಷಗಳ ಹಿಂದೆ ಇದೇ ರೀತಿ ಆನೆಗಳು ಬಂದಿದ್ದವು.

ಶುಕ್ರವಾರ (ಆ.16) ರಾತ್ರಿ ಈ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕೃಷಿಕರು ಪಟಾಕಿ ಸಿಡಿಸಿ ಮಧ್ಯರಾತ್ರಿಯವರೆಗೆ ಕಾದು ಕುಳಿತಿದ್ದರು. ಆದರೆ ಅದುವರೆಗೆ ಆನೆಯ ಪತ್ತೆಯೇ ಇರಲಿಲ್ಲ. ಇನ್ನು ಆನೆ ಬರಲಿಕ್ಕಿಲ್ಲ ಎಂದು ಮಲಗಿದ ಬಳಿಕ ಆನೆ ದಾಳಿ ನಡೆಸಿತ್ತು. ಶನಿವಾರ ಕೂಡ ರೈತರು ತಡರಾತ್ರಿ ಎರಡು ಗಂಟೆಯವರೆಗೂ ಕಾದು ಕುಳಿತಿದ್ದರು. ಆನೆಯ ಸುಳಿವು ಇರಲಿಲ್ಲ. ಮುಂಜಾನೆ ಎದ್ದು ತೋಟಕ್ಕೆ ಹೋದಾಗ ಅಲ್ಲಿ ಆನೆ ದಾಂಧಲೆ ನಡೆಸಿಯಾಗಿತ್ತು.