ಸುಳ್ಯ: ಆ.14; ಅವಿಭಜಿತ ಸುಳ್ತ ತಾಲೂಕಿನಾದ್ಯಂತ ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲಿತ್ತು. ಆ ಬಳಿಕ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಐವರ್ನಾಡು, ಪಂಜ, ಅರಂತೋಡು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ ಮತ್ತಿತರ ಪರಿಸದಲ್ಲೂ ಉತ್ತಮ ಮಳೆಯಾಗಿದೆ.
ಏಕಾಏಕಿ ಸುರಿದ ಮಳೆಯಿಂದ ಕೆಲವೆಡೆ ನದಿ ತೊರೆಗಳು ಉಕ್ಕಿ ಹರಿದು ನೆರೆಭೀತಿ ಉಂಟಾಗಿತ್ತು. ಸಂಪಾಜೆ, ಕಲ್ಲುಗುಂಡಿ, ಕೊಯನಾಡು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಇಲ್ಲಿನ ಮನೆಯೊಂದರ ಸುತ್ತ ರಾತ್ರಿ ಹೊಳೆ ನೀರು ಆವರಿಸಿತು.
ಆತಂಕಿತರಾದ ಮನೆಯವರು ಮನೆಗೆ ಬೀಗ ಹಾಕಿ ಹೊರಗೆ ನಿಂತರು. ಸಂಪಾಜೆಯ ಗ್ಯಾರೇಜ್ ಒಂದಕ್ಕೆ ನೀರು ಆವರಿಸಿ ಗ್ಯಾರೇಜ್‌ನಲ್ಲಿದ್ದ ವಾಹನಗಳನ್ನು ಸ್ಥಳೀಯರ ಸಹಕಾರದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.
ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜ ಸಮೀಪದ ಬೊಳ್ಮಲೆಯಲ್ಲಿ ನದಿ ಉಕ್ಕಿ ಹರಿದ ಪರಿಣಾಮ ನೀರು ಹೆದ್ದಾರಿಗೆ ಆವರಿಸಿ ವಾಹನ ಸವಾರರು ಪ್ರಯಾಸಪಟ್ಟರು. ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ಕೆಲಕಾಲ ಆತಂಕ ಸೃಷ್ಟಿಸಿತ್ತು.