ಸುಳ್ಯ: ಚಾಂದಿನಿಯ ಚಿಕಿತ್ಸೆಗಾಗಿ‌‌ ಸಿಎಂ ಪರಿಹಾರ ನಿಧಿಯಿಂದ 9 ಲಕ್ಷ ನೆರವು ಬಿಡುಗಡೆ|

ಸಮಗ್ರ ನ್ಯೂಸ್: ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ, ಸುಳ್ಯ ತಾಲೂಕಿನ ಸುಳ್ಯ ನಗರದ ನಾವೂರಿನ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರ ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರ ಮತ್ತೆ ₹ 9 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ₹ 4 ಲಕ್ಷ ಬಿಡುಗಡೆಯಾಗಿತ್ತು. ಉಳಿಕೆ ಮೊತ್ತ ಬಿಡುಗಡೆ ಆಗದ ಕಾರಣ ಚಿಕಿತ್ಸೆ ಮುಂದುವರಿಸಲು ಆಸ್ಪತ್ರೆಯವರು ನಿರಾಕರಿಸಿದ್ದರು. ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಇದ್ದರೆ ದಯಾಮರಣವನ್ನಾದರೂ ನೀಡಿ’ ಎಂದು ಕೋರಿ ಚಾಂದಿನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಸರ್ಕಾರ ಉನ್ನತ ಅಧಿಕಾರಿಗಳಿಗೆ ಈಚೆಗೆ ಇ- ಮೇಲ್‌ ಕಳುಹಿಸಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರ ಸಚಿವಾಲಯವು, ‘ಪರಿಶಿಷ್ಟ ಪಂಗಡಕ್ಕೆ ಸೇರಿದ ಚಾಂದಿನಿ ಅವರ ಚಿಕಿತ್ಸೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನರಿಗೆ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸೆ ಸೇವೆ ಒದಗಿಸಲು ನಿಗದಿಪಡಿಸಿದ ಅನುದಾನದಿಂದ ಆರ್ಥಿಕ ಸಹಾಯ ಒದಗಿಸಬೇಕು’ ಎಂದು ಸೂಚಿಸಿತ್ತು. ಬಳಿಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ₹ 9 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಚಾಂದಿನಿ ಅವರ ಆಪ್ತ ಮೂಲಗಳು ತಿಳಿಸಿವೆ.

Leave a Comment