ಎಣ್ಮೂರು: ಆದಿಗರಡಿಯಲ್ಲಿ ಬ್ರಹ್ಮಬೈದರ್ಕಳ ನೇಮೋತ್ಸವ ಸಂಪನ್ನ

ನಿಂತಿಕಲ್ಲು: ಎಣ್ಮೂರು ನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೇರುಗಳ ಗರಡಿಯಲ್ಲಿ ಆದಿ ಬೈದೇರುಗಳ ನೇಮೋತ್ಸವ ನಡೆಯಿತು. ಭಕ್ತರು ಬೈದೇರುಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ನೇಮೋತ್ಸವದ ನಿಮಿತ್ತ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಮಹಾ ಅನ್ನಸಂತರ್ಪಣೆ ನೆರವೇರಿತು.

ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು, ನೇತ್ರಾದಿ ಗರಡಿಯಲ್ಲಿ ದರ್ಶನ ನಡೆಯಿತು. ಬೈದೆರುಗಳು ಗರಡಿ ಇಳಿಯುವ ಕಾರ್ಯ, ಗರಡಿಯಲ್ಲಿ ನರ್ತನ ಸೇವೆ, ರಂಗಸ್ಥಳದಲ್ಲಿ ನರ್ತನ ಸೇವೆ, ಕಿನ್ನಿದಾರು ಗರಡಿ ಇಳಿಯುವ ಕಾರ್ಯ, ರಂಗಪ್ರವೇಶ ಮಾಡಿ ಕಿನ್ನಿದಾರುವಿನ ನರ್ತನ ಸೇವೆ, ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ತೆರಳಿ ಬೀಡಿಗೆ ಕಾಣಿಕೆ ಅರ್ಪಿಸಿ ಗರಡಿಗೆ ಮರಳಿದ ಬೈದೇರುಗಳು ನರ್ತನ ಸೇವೆ ನೆರವೇರಿಸಿದರು.

ಬಳಿಕ ರಂಗಸ್ಥಳದಲ್ಲಿ ಕೋಟಿ ಚೆನ್ನಯರ ದರ್ಶನ ನೆರವೇರಿತು. ನಂತರ ಬೈದೇರುಗಳಲ್ಲಿ ಅರಿಕೆ ಮಾಡಿಕೊಂಡು ಭಕ್ತರು ಗಂಧಪ್ರಸಾದ ಸ್ವೀಕರಿಸಿದರು. ಬಳಿಕ ತುಲಾಭಾರ ನೆರವೇರಿತು. ಗರಡಿಯ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಕಟ್ಟಬೀಡು ಮನೆತನದವರು, ಭಕ್ತರು ಭಾಗವಹಿಸಿದ್ದರು.