ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಹುಚ್ಚಾಟ ನಡೆಸಿದ ಪ್ರಕರಣ| ಆರೋಪಿಗಳ ಪತ್ತೆಹಚ್ಚಿ ವಿಚಾರಣೆ

ಸುಳ್ಯ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಯುವಕರ ತಂಡ ಹುಚ್ಚಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಚ್ಚಾಟ ಮೆರೆದ ಯುವಕರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನಲ್ಲಿದ್ದ 7 ಜನರಲ್ಲಿ 6 ಮಂದಿ ಹುಚ್ಚಾಟ ಮೆರೆದಿದ್ದರು. ಮೇಲ್ಭಾಗ ತೆರದುಕೊಂಡಿದ್ದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ಬಂದ್ದಿದ್ದು, ಇಬ್ಬರು ಹಿಂದಿ ಸೀಟಿನ ಎಡ ಹಾಗೂ ಬಲ ಬದಿಯ ಡೋರ್‌ ಭಾಗದಿಂದ ಮೇಲೆ ಬಂದಿದ್ದು, ಇಬ್ಬರು ಮುಂದಿನ ಡೋರ್‌ನ ಭಾಗದಿಂದ ಮೇಲೆದ್ದು ನಿಂತು ಹುಚ್ಚಾಟ ಮೆರೆಯುತ್ತಿರುವ ವಿಡೀಯೋ ವೈರಲ್‌ ಆಗಿತ್ತು.

ಈ ಬಗ್ಗೆ ಸುಳ್ಯ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದು, ಹುಚ್ಚಾಟ ಮೆರೆದ ತಂಡ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರೆಂದು ಪತ್ತೆ ಹಚ್ಚಿದ್ದಾರೆ. ಕಾರಿನಲ್ಲಿ 7 ಮಂದಿ ಇದ್ದು ಅವರು ಮಡಿಕೇರಿಯಿಂದ ಭಟ್ಕಳಕ್ಕೆ ತೆರಳುವ ವೇಳೆ ಈ ರೀತಿ ಪುಂಡಾಟ ಮೆರೆದಿದ್ದಾರೆ. ಸಾಜೀಲ್‌ ಎಂಬಾತ ಕಾರನ್ನು ಚಾಲನೆ ಮಾಡುತ್ತಿದ್ದು, ಅತೀಫ್‌, ಸುಮನ್‌, ಜಯೇಶ್‌ (ಬಂದಿಲ್ಲ), ಸಾಜೀಬ್‌, ಸಾಹಿಬಝ್, ಹಸನ್‌ ಎಂಬವರು ಕಾರಿನ ಮೇಲೆ ಪುಂಡಾಟ ಮೆರೆದವರು ಎಂದು ತಿಳಿದುಬಂದಿದೆ. ಕೃತ್ಯ ಎಸಗಿದವರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.