ನಡುಗಲ್ಲು ಆತ್ಮಹತ್ಯೆ ಪ್ರಕರಣ| ಪತ್ನಿ ಮನೆ ತೊರೆದುದೇ ಘಟನೆಗೆ ಕಾರಣ

ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ತಾಯಿ ಹಾಗೂ ಮಗ ವಿಷ ಸೇವಿಸಿ ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಮಗನ ಹೆಂಡತಿ ಮನೆ ಬಿಟ್ಟು ಹೋಗಿದ್ದೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆಂದು ತಿಳಿದುಬಂದಿದೆ.

ಮೃತ ನಿತಿನ್ ವರ್ಷದ ಹಿಂದೆ ವಿವಾಹವಾಗಿದ್ದು, ಪತಿ – ಪತ್ನಿ ನಡುವೆ ಸಂಬಂಧ ಅಷ್ಟಕಷ್ಟೇ ಇತ್ತು‌ ಎಂದು ಹೇಳಲಾಗಿದೆ. ಮಾ.31ರಂದು ನಿತಿನ್ ಪತ್ನಿ ದೀಕ್ಷಾ ಮನೆಯಿಂದ ಗಲಾಟೆ ಮಾಡಿಕೊಂಡು ಹೊರಟು ಸಂಬಂಧಿಕರಾದ ಲಕ್ಷ್ಮೀನಾರಾಯಣ ಎಂಬವರ ಮನೆಗೆ ತೆರಳಿ, ‘ನನ್ನ ಗಂಡ ಸರಿ ಇಲ್ಲ, ಆತನೊಂದಿಗೆ ಬಾಳಲಾರೆ, ನೀವು ಹೋಗಿ ತಿಳಿಸಿ’ ಎಂದು ಹೇಳಿ ತನ್ನ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ.

ಏ.6ರಂದು ಲಕ್ಷ್ಮೀನಾರಾಯಣರು ದೀಕ್ಷಾ ಮನೆ ಬಿಟ್ಟು ಹೋದ ಬಗ್ಗೆ ನಿತಿನ್ ಮನೆಗೆ ಬಂದು ಮಾತುಕತೆ ನಡೆಸಲು ತೆರಳಿದ್ದು, ಈ ವೇಳೆ ತಾಯಿ ಮತ್ತು ಮಗ ಮಲಗಿಕೊಂಡಿದ್ದರು. ಈ ವೇಳೆ‌ ಅನಾರೋಗ್ಯದಿಂದ ಇರುವ ನಿತಿನ್ ತಂದೆ ಕುಶಾಲಪ್ಪರ ಜೊತೆ ವಿಚಾರಿಸಿದಾಗ ದೀಕ್ಷಾ ಮನೆ ಬಿಟ್ಟು ಹೋದ ಕಾರಣ ಮನನೊಂದು ವಿಷಸೇವನೆ ಮಾಡಿರುವುದಾಗಿ ತಿಳಿಸಿದ್ದಾರೆ.

ನಂತರ ಇಬ್ಬರನ್ನೂ ಆಸ್ಪತ್ರೆಗೆ ‌ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ನಿತಿನ್ ಮೃತಪಟ್ಟಿದ್ದು, ತಾಯಿ ಸುಲೋಚನ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ಕುರಿತಂತೆ ನಿತಿನ್ ಚಿಕ್ಕಪ್ಪ ಅನಂತಕೃಷ್ಣ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು‌‌ ದಾಖಲಿಸಿದ್ದಾರೆ.