ಗುತ್ತಿಗಾರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಫೆ.23ರ ಭಾನುವಾರ ನಡೆಯಲಿದ್ದು, ಆಡಳಿತಾರೂಢ ಸಹಕಾರ ಭಾರತಿ ಅಭ್ಯರ್ಥಿಗಳು ಸಂಘದ ಅಭಿವೃದ್ಧಿಯ ಮೂಲಮಂತ್ರದೊಂದಿಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಸಂಘದಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ವೆಂಕಟ್ ದಂಬೆಕೋಡಿ ನೇತೃತ್ವದ ಬಳಗ ಈಗಾಗಲೇ ಹಲವು ಸುತ್ತಿನ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿ ಭದ್ರಕೋಟೆಯನ್ನು ಮತ್ತಷ್ಟು ಭದ್ರಗೊಳಿಸಲು ತಮ್ಮ ಹಿಂದಿನ ಆಡಳಿತದ ವೈಖರಿಯನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಸಂಘದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ನಡೆಸಲಾದ ಹಲವು ಯೋಜನೆಗಳನ್ನು ಸಹಕಾರಿ ಸಂಘದ ಮತದಾರರ ಮುಂದಿರಿಸಿದ್ದು ಆ ಮೂಲಕ ಮತ್ತೊಮ್ಮೆ ಗದ್ದುಗೆ ಏರಲು ಸಿದ್ದತೆ ನಡೆಸಿದ್ದಾರೆ.
ರೈತ ಸಭಾಭವನ, ಸಂಘದಲ್ಲಿ ಪ್ರತಿದಿನ ಮೊಳಗಿಸುವ ರಾಷ್ಟ್ರಗೀತೆ, ಸದಸ್ಯರಿಗೆ ನೀಡುವ ಸರಳ ವಿಧಾನದ ಸಾಲ ಸೌಲಭ್ಯ, ಪೆಟ್ರೋಲಿಯಂ ಪಂಪ್, ಹಾಗೂ ಸೂಪರ್ ಮಾರ್ಕೆಟ್ ಗಳು ಈ ಹಿಂದಿನ ಅವಧಿಯದ್ದಾಗಿದ್ದು, ಜೊತೆಗೆ ಸಂಘವನ್ನು ಇನ್ನಷ್ಟು ಬಲಗೊಳಿಸಲು ಮತ್ತೊಂದು ಅವಕಾಶ ನೀಡುವಂತೆ ಸಹಕಾರ ಭಾರತಿ ಅಭ್ಯರ್ಥಿಗಳು ಸಹಕಾರಿಗಳೊಂದಿಗೆ ಮನವಿ ಮಾಡುತ್ತಿದ್ದು, ಮತದಾರರು ಯಾರಿಗೆ ಮಣೆಹಾಕುತ್ತಾರೆ ಎಂಬುದು ಫೆ.23ರ ಸಂಜೆ ತಿಳಿದುಬರಲಿದೆ.