ಗುತ್ತಿಗಾರು ಪ್ರಾ.ಕೃ.ಪ ಸಹಕಾರಿ ಸಂಘದ ಚುನಾವಣೆ| ರೈತ ಸಹಕಾರ ಭಾರತ ಪ್ರಣಾಳಿಕೆಯತ್ತ ಸಹಕಾರಿಗಳ ಚಿತ್ತ| ಮತ್ತೆ ಅಧಿಕಾರಕ್ಕಾಗಿ ಸಹಕಾರ ಭಾರತಿ ಹೋರಾಟ

ಗುತ್ತಿಗಾರು: ಇಲ್ಲಿನ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ನಾಳೆ ( ಫೆ.23) ನಡೆಯಲಿದ್ದು ಅಧಿಕಾರ ಗದ್ದುಗೆ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಯುತಿದ್ದು ಬಿಜೆಪಿ ಬೆಂಬಲಿತ 12 ಮಂದಿ ಹಾಗೂ ಪ್ರಭುದ್ಧ ಮನಸ್ಸಿನ ಸಮಾನ ಮನಸ್ಕರು, ರೈತ ಸಹಕಾರಿ ಭಾರತ ತಂಡದ 12 ಮಂದಿ ಹಾಗೂ ಪಕ್ಷೇತರರು ಸೇರಿ 27 ಮಂದಿ ಸ್ಪರ್ಧಾಕಣದಲ್ಲಿದ್ದು ಇನ್ನೂ ಒಂದೇ ದಿನ ಬಾಕಿ ಇರುವಾಗ ಅಭ್ಯರ್ಥಿಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿರುತ್ತದೆ.

ಇದುವರೆಗೆ ಬಿಜೆಪಿಯ ಕಾರ್ಯಕರ್ತರೇ ಅಭ್ಯರ್ಥಿಗಳ ಗೆಲುವಿಗೆ ದುಡಿಯುತ್ತಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಅಭ್ಯರ್ಥಿಗಳು ಕೂಡ ಅಲ್ಲಲ್ಲಿ ಮತಯಾಚನೆಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ರೈತ ಸಹಕಾರಿ ಭಾರತ ತಂಡದವರು ಸಂಘದ ಸದಸ್ಯರಿಗಾಗಿ ಹಲವಾರು ಯೋಜನೆಗಳನ್ನು ತರುವ ಬಗ್ಗೆ ಈಗಾಗಲೇ ಮನವಿಗಳನ್ನು ಮುದ್ರಿಸಿ ಹಂಚಿರುತ್ತಾರೆ. ಅದರಲ್ಲಿ ಪ್ರಮುಖವಾಗಿ ರೈತರ ಪಾಲು ಬಂಡವಾಳಕ್ಕೆ ಹೆಚ್ಚಿನ ಲಾಭಾಂಶ ನೀಡುವ ಬಗ್ಗೆ ಹಾಗು ಗೃಹ ಬಳಕೆ ವಸ್ತು ಖರೀದಿಗೆ ಸಾಲ ಮತ್ತು ಗೃಹ ನಿರ್ಮಾಣ ಸಾಲ 25 ಲಕ್ಷಕ್ಕೆ ನೀಡುವ ಬಗ್ಗೆ ಘೋಷಣೆಯಾಗಿದ್ದು ಎಲ್ಲರ ಚಿತ್ತ ಆ ಕಡೆ ಇರುವಂತಿದೆ.

ಸಂಘದಲ್ಲಿ ಸುಮಾರು 1890ರಷ್ಟು ಮಂದಿ ಮತದಾರರಿದ್ದು, ಅದರಲ್ಲೂ ಒಂದಷ್ಟು ಹೊಸ ಹಾಗೂ ಯುವ ಮತದಾರರಿದ್ದಾರೆ. ಮತದಾನ ತಪ್ಪಿದವರಿಗಂತೂ ತೀವ್ರ ಗೊಂದಲವು ಇದೆ. ಒಟ್ಟಾರೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ಗೆಲುವು ಯಾರದ್ದು ಎಂಬುದಕ್ಕೆ ಉತ್ತರ ಭಾನುವಾರ (ಫೆ.23) ದೊರೆಯಲಿದೆ.