ಹಿರಿಯ ಯಕ್ಷಗಾನ ಅರ್ಥಧಾರಿ, ನಿವೃತ್ತ ಶಿಕ್ಷಕ ಕೆ.ವಿ ಗಣಪಯ್ಯ ನಿಧನ

ಸುಳ್ಯ: ಹಿರಿಯ‌ ತಲೆಮಾರಿನ ಯಕ್ಷಗಾನ ಕಲಾವಿದ, ಅರ್ಥಧಾರಿ, ನಿವೃತ್ತ ಶಿಕ್ಷಕ ಕೆ.ವಿ ಗಣಪಯ್ಯ (92 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

1933 ಜೂನ್ 5ರಂದು ಜನಿಸಿದ್ದ ಅವರು ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲ್ಲೂಕುಗಳ ಅನೇಕ ಸರ್ಕಾರಿ ಶಾಲೆಗಳಲ್ಲಿ ಹಿಂದಿ ಪಂಡಿತರಾಗಿ, ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಕಾಣಿಯೂರು ನಿಂತಿಕಲ್ಲು ಬಳಿಯ ಆಲಾಜೆ ಎಂಬಲ್ಲಿ ಕೃಷಿಕರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು.

ಹರಿತವಾದ ಮಾತಿನ ಅರ್ಥಗಾರಿಕೆಗೆ ಹೆಸರಾಗಿದ್ದ ಗಣಪಯ್ಯನವರು, ಪುರಾಣ ಪ್ರಸಂಗಗಳ ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ ಮೊದಲಾದ ಪಾತ್ರಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತಿದ್ದರು. ಪುರಾಣ ಪ್ರವಚನಗಳಲ್ಲಿಯೂ ಪ್ರಸಿದ್ಧರಾಗಿದ್ದರು. ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ, ಅರ್ಥಧಾರಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಪುತ್ತೂರಿನ ಯಕ್ಷ ಆಂಜನೇಯ ಪ್ರಶಸ್ತಿ, ಉಡುಪಿಯ ಯಕ್ಷ ಕಲಾ ರಂಗ ಪ್ರಶಸ್ತಿ ಹಾಗೂ ದೇವಾನಂದ ಭಟ್ಟರ ಯಕ್ಷಕಲಾ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಭಾಜನರಾಗಿದ್ದರು.