ಸುಳ್ಯ: ಇಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ ಇಬ್ಬರು ಆಸ್ಪತ್ರೆಯ ಸಿಬಂದಿಗಳಿಗೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದ ಖಾಸಗಿ ಮೆಡಿಕಲ್ ಕಾಲೇಜಿನ ಪಿಆರ್ಒ ಸ್ವಸ್ತಿಕ್ ಎ.ಎಸ್. ಅವರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಸ್ವಸ್ತಿಕ್ ಅವರು ಜ.13ರಂದು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಮೊಟಾರ್ ಸೈಕಲ್ನಲ್ಲಿ ಸವಾರ ಹಾಗೂ ಸಹ ಸವಾರರೊಬ್ಬರು ಬಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದಾರೆ.
ಈ ವೇಳೆ ಅವರಲ್ಲಿ ವಿಚಾರಿಸಿದಾಗ ಅವರು ಉಡಾಫೆಯಿಂದ, ಚಿಕಿತ್ಸೆ ಕೊಡಬೇಕು ಇಲ್ಲವಾದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಏರುಧ್ವನಿಯಲ್ಲಿ ಹೇಳಿದ್ದು, ಈ ವೇಳೆ ತುರ್ತು ನಿಗಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ಸಜಿತಾ, ಕಾವೇರಮ್ಮ, ದಮಯಂತಿ, ಜಯಪ್ರಕಾಶ್, ಶ್ರೀಕಾಂತ್, ಮಹಾಲಿಂಗ, ಸಾವಿತ್ರಿ ಅವರು ಸ್ಥಳಕ್ಕೆ ಬಂದಿದ್ದು ಆ ಸಮಯ ಅವರಿಗೂ ಕೂಡ ಅವ್ಯಾಚವಾಗಿ ಬೈದು, ನೀವು ನಮಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.
ಚಿಕಿತ್ಸೆಗೆ ಬಂದಿದ್ದ ಇಬ್ಬರು ಸ್ವಸ್ತಿಕ್ ಹಾಗೂ ಜಯಪ್ರಕಾಶ್, ಶ್ರೀಕಾಂತ್, ಮಹಾಲಿಂಗ ಅವರಿಗೆ ಹಲ್ಲೆ ಮಾಡಿದ್ದಲ್ಲದೇ, ಸಿಬಂದಿಗಳಿಗೆ, ಭದ್ರತಾ ಸಿಬಂದಿಗಳಿಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿತರನ್ನು ದೇವ ಚಿಂತನ್ ಮತ್ತು ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.