ಪೆರಾಜೆ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಪೆರಾಜೆ: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ 2020ನ ಮೇ 8ರಂದು ನಡೆದ ಉತ್ತಮ ಕುಮಾರ ಎಂಬವರ ಕೊಲೆ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ತಾರಿಣಿ ಮತ್ತು ಧರಣಿ ಕುಮಾರ್‌ ನಿಗೆ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಪೆರಾಜೆ ಗ್ರಾಮದ ಉತ್ತರಕುಮಾರ ಎಂಬವರೊಂದಿಗೆ ಅವರ ಅಣ್ಣನ ಪತ್ನಿ ತಾರಿಣಿ ಮತ್ತು ಆಕೆಯ ಮಗ ಧರಣಿ ಕುಮಾರ್‌ ಎಂಬಿಬ್ಬರು ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಕುತ್ತಿಗೆ, ಕೈ, ತೊಡೆ ಹಾಗೂ ಶರೀರದ ಎಲ್ಲ ಭಾಗಗಳಿಗೆ ಕಡಿದು ಕೊಲೆ ಮಾಡಿದ್ದಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮೇ 9ರಂದು ಆರೋಪಿಗಳಾದ ತಾರಿಣಿ ಮತ್ತು ಧರಣಿ ಕುಮಾರನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿಗಳಾದ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್‌. ದಿವಾಕರ್‌ಮತ್ತು ಸಹಾಯಕ ತನಿಖಾಧಿಕಾರಿಗಳಾದ ಎ.ಎಸ್‌.ಐ. ಶ್ರೀಧರ್‌ರವರು ಪ್ರಕರಣದ ತನಿಖೆ ಕೈಗೊಂಡು 2020ರ ಜುಲೈ 14ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಗುರುವಾರ ಆರೋಪಿಗಳಾದ ತಾರಿಣಿ (46) ಮತ್ತು ಧರಣಿ ಕುಮಾರ್‌ (22) ಇವರಿಬ್ಬರಿಗೆ ಕೊಲೆ ಮಾಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ತಲಾ ಒಂದು ಲಕ್ಷ ರೂ. ದಂಡ ಹಾಗೂ ಸಾಕ್ಷ್ಯ ನಾಶಪಡಿಸಿದ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಮತ್ತು ತಲಾ 10,000 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ್‌ ಅವರು ತೀರ್ಪು ನೀಡಿದ್ದಾರೆ. ಇಲಾಖೆಯ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿ‌ನಿ ಅವರು ವಾದ ಮಂಡಿಸಿದ್ದರು.