ಕುಕ್ಕೆ ಸುಬ್ರಹ್ಮಣ್ಯ: ರಾತ್ರಿ ವೇಳೆ ಪುರ ಪ್ರವೇಶ ಮಾಡಿದ ಕಾಡಾನೆ| ಸಾರ್ವಜನಿಕರಿಗೆ ಎಚ್ಚರದಿಂದಿರಲು ಸೂಚನೆ

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿಗೆ ಕಾಡಾನೆಯೊಂದು ಡಿ.1 ರ ಸಂಜೆ 7.30 ಸುಮಾರಿಗೆ ಬಂದು ಮಠದ ಬಳಿ ಇದ್ದು ಮತ್ತೆ ಕಾಡು ಪ್ರವೇಶಿದ ಘಟನೆ ವರದಿಯಾಗಿದೆ.

ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ವ್ಯಾಸಮಂದಿರ ಬಳಿ ಬಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಹತ್ತಿರ ಬಂದಿದೆ. ಅಲ್ಲಿ ಅಲ್ಪ ಕಾಲ ಇದ್ದು ಮತ್ತೆ ಅರಣ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಕಾಡಾನೆ ಬರುವುದನ್ನು ನೋಡಿ ಜನ ಅಡಗಿ ಕುಳಿತಿದ್ದಾರೆ. ದೇವಳದ ಸಮೀಪದ ಪರಿಸದಲ್ಲಿ ಆನೆ ಸಂಚರಿಸಿರುವುದು ಅಲ್ಪ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆನೆ ಕಾಡಿಗೆ ತೆರಳಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಆನೆ ನಾಡಿಗೆ ಬಂದ ಕಾರಣ ಜನ ಎಚ್ಚರಿಕೆಯಿಂದ ಇರುವಂತೆ ಸ್ಥಳೀಯಾಡಳಿತ ಹಾಗೂ ದೇವಸ್ಥಾನದ‌ ಅಧಿಕಾರಿಗಳು ಸೂಚಿಸಿದ್ದಾರೆ. ದೇವಸ್ಥಾನದಲ್ಲಿ ಚಂಪಾಷಷ್ಟಿ ಮಹೋತ್ಸವ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ.