ಸುಳ್ಯ: ವೃದ್ದಾಪ್ಯ‌ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ವೃದ್ಧ ತಾ| ಕಚೇರಿಯಲ್ಲಿ ಸಾವು

ಸುಳ್ಯ: ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಅಡ್ಕಾರಿನ ರಾಘವ ಆಚಾರ್ಯ(65) ಅವರು ಸುಳ್ಯ ತಾಲೂಕು ಕಚೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನ.27ರಂದು ಸಂಭವಿಸಿದೆ.

ಅವರ ಅರ್ಜಿಯನ್ನು ಸ್ವೀಕರಿಸಿದ್ದ ಸಿಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳುವಂತೆ ತಿಳಿಸಿದ್ದರು.
ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ರಾಘವೇಂದ್ರ ಅವರನ್ನು ಸಿಬಂದಿ ಕೌಂಟರ್‌ ಬಳಿಗೆ ಕರೆದಿದ್ದು, ಅವರು ಕೌಂಟರ್‌ ಬಳಿಗೆ ತೆರಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.

ತತ್‌ಕ್ಷಣ ಅಲ್ಲಿನ ಸಿಬಂದಿ ಅವರನ್ನು ಉಪಚರಿಸಿ, ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದರು.