ಸುಳ್ಯ: ಡಾ.ಎಚ್.ಎಂ. ಕುಮಾರಸ್ವಾಮಿ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023ನೆ ಸಾಲಿನ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರು ನೆಹರು ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕರಾಗಿದ್ದಾರೆ.
ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ವಾಂಸರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರವು 2023 ಹಾಗೂ 2024ನೆ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಣೆಮಾಡಿದ್ದು, 2023ರ ಸಾಲಿನ ಪ್ರಶಸ್ತಿಗೆ ಕುಮಾರಸ್ವಾಮಿಯವರೊಂದಿಗೆ ಹಿರಿಯ ಲೇಖಕಿ ಡಾ.ದು.ಸರಸ್ವತಿ, ಡಾ.ನಟರಾಜ್ ಹುಳಿಯಾರ್, ಪ್ರೊ.ಎಚ್.ಎಸ್. ರಾಘವೇಂದ್ರರಾವ್, ವಿನಯ ಚೈತನ್ಯ ಅವರೂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಡಾ.ಆರ್.ಕೆ.ಕುಲಕರ್ಣಿ, ಡಾ.ಕರೀಗೌಡ ಬೀಚನಹಳ್ಳಿ, ಡಾ.ರಾಜೇಂದ್ರ ಚೆನ್ನಿ, ಡಾ. ಬೋಡೆ ರಿಯಾಝ್ ಅಹ್ಮದ್, ಡಾ.ಬಸು ಬೇವಿನಗಿಡದ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯೋತ್ತಮ ಪ್ರಶಸ್ತಿ
ಕುಮಾರ ಸ್ವಾಮಿಯವರೌಗೆ ಇತ್ತೀಚೆಗಷ್ಟೆ ಮಹಾರಾಷ್ಟ್ರದ ನಾಶಿಕ್‌ನ ವಿದ್ಯೋತ್ತಮ ಫೌಂಡೇಶನ್ ನವರು ಹಿಂದಿ ಮಾತೃ ಭಾಷೆ ಅಲ್ಲದ ಹಿಂದಿ ಲೇಖಕರಿಗೆ ನೀಡುವ ‘ವಿದ್ಯೋತ್ತಮ ಸಾಹಿತ್ಯ ಸನ್ಮಾನ’ ಪ್ರಶಸ್ತಿ ಘೋಷಣೆಯಾಗಿದೆ. ಡಾ. ಎಚ್. ಎಂ.ಕುಮಾರಸ್ವಾಮಿ ಯವರ ‘ಆಧುನಿಕ ಕನ್ನಡ ಮಹಿಳಾ ಕಾವ್ಯ’ ಅನುವಾದಿತ ಕವನ ಸಂಕಲನ ಈ ಪ್ರಶಸ್ತಿಗೆ ಆಯ್ಕೆ ಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ 2025 ರ ಜನವರಿ 5 ರಂದು ನಾಶಿಕ್ ನಲ್ಲಿ ನಡೆಯಲಿದೆ.
Dr. ಎ ಚ್.ಎಂ. ಕುಮಾರಸ್ವಾಮಿ ಯವರು ನಿವೃತ್ತ ಹಿಂದಿ ಪ್ರಾಧ್ಯಾಪಕರು. ಸುಳ್ಯದ ಎನ್ನೆಂಸಿಯಲ್ಲಿ ಪ್ರಾಧ್ಯಾಪಕರಾಗಿದ್ದು ವಿದ್ಯಾರ್ಥಿಗಳ ಪ್ರೀತಿಪಾತ್ರರಾಗಿದ್ದರು. ಇವರು ಇದುವರೆಗೆ 32 ಕ್ಕೂ ಮಿಕ್ಕಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೈಸೂರಿನ ಸಾಹಿತ್ಯ ಹಾಗು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ.
ಇವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸ್ವತಂತ್ರ ಸಾಹಿತ್ಯ ರಚನೆ ಜೊತೆಗೆ ಮುಖ್ಯವಾಗಿ ಎರಡೂ ಭಾಷೆಗಳಲ್ಲಿ ಅನುವಾದ ಕಾರ್ಯ ಮಾಡುತ್ತಿದ್ದಾರೆ. ಇವರಿಗೆ ಹಲವು ಪ್ರಶಸ್ತಿ ಹಾಗು ಪುರಸ್ಕಾರಗಳು ಸಂದಿವೆ.