ಸುಳ್ಯ: ರಾತ್ರಿ ವೇಳೆ ಟೆಂಪೋದಲ್ಲಿ ಗೋಸಾಗಾಟ; ಪರಿಶೀಲನೆ

ಸುಳ್ಯ: ರಾತ್ರಿ ವೇಳೆ ಕಡಬದಿಂದ ಮೈಸೂರು ಕಡೆಗೆ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಸುಳ್ಯದ ಮೊಗರ್ಪಣೆ ಬಳಿ ಹಿಂದೂ ಪರ ಸಂಘಟಕರು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶುಕ್ರವಾರ(ಅ.18) ರಾತ್ರಿ ನಡೆದಿದೆ.

ಕಡಬದಿಂದ ಟೆಂಪೋ ವಾಹನದಲ್ಲಿ ತರುತ್ತಿದ್ದ ಗೋವುಗಳನ್ನು ಮೊಗರ್ಪಣೆ ಮಸೀದಿ ಬಳಿ ಸಂಘಟನೆಯವರು ತಡೆದಿದ್ದಾರೆ.

ವಾಹನದಲ್ಲಿ ಎರಡಕ್ಕೂ ಹೆಚ್ಚು ಗೋವುಗಳಿದ್ದು, ಈ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ವಾಹನ ಮತ್ತು ಅದರಲ್ಲಿದ್ದ ಗೋವುಗಳನ್ನು ಹಾಗೂ ವ್ಯಕ್ತಿಗಳನ್ನು ಸುಳ್ಯ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.

ಆಗ ವಾಹನದಲ್ಲಿ ಮೈಸೂರಿನಿಂದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಿಕರು ಕಡಬದಿಂದ ಗೋವುಗಳನ್ನು ಖರೀದಿಸಿ ತಮ್ಮೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೆ ಬೇಕಾದ ದಾಖಲೆಗಳೆಲ್ಲವೂ ಅವರ ಬಳಿ ಇದ್ದುದರಿಂದ ವಿಚಾರಣೆ ನಡೆಸಿ ಅವರನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದುಬಂದಿದೆ.