ಪಂಜ: ಹಿಂದೂ ಧರ್ಮದ ಒಂದು ಸಮುದಾಯದ ಹೆಣ್ಣುಮಕ್ಕಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋ ವಿವಾದ ಎಬ್ಬಿಸಿದ ಪ್ರಕರಣದಲ್ಲಿ, ಅರಣ್ಯಾಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ಸುಳ್ಯ ತಾಲೂಕಿನ ಪಂಜದಲ್ಲಿ ನಡೆದಿದೆ.
ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಮುಖಂಡ ಸಚಿನ್ ವಳಲಂಬೆ ದೂರಿನಡಿ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಠಾಣೆಯಲ್ಲಿ ಎಫ್‌ಐಆರ್ ಹಾಕಲಾಗಿದೆ. ಬಿಎನ್ಎಸ್ ಕಾಯ್ದೆ 79ರಡಿ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇವರು ಬಿಲ್ಲವ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋವನ್ನು ಹಿಂದೂ ಸಂಘಟನೆಗಳು ಹಂಚಿಕೊಂಡಿದ್ದವು. ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂದೂ ಜಾಗರಣ ವೇದಿಕೆ ಇಂದು ಪ್ರತಿಭಟನೆಗೆ ಎಚ್ಚರಿಕೆ ನೀಡಿತ್ತು. ಪ್ರತಿಭಟನೆಯ ಬಿಸಿಯ ಬೆನ್ನಲ್ಲೇ ಇದೀಗ ಎಫ್‌ಐಆರ್ ದಾಖಲಿಸಲಾಗಿದೆ.
ಸುರೇಶ್ ಎಂಬ ಹಿಂದೂ ಕಾರ್ಯಕರ್ತನ ಜೊತೆ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಸರ್ಕಾರಿ ಅಧಿಕಾರಿಯ ಆಡಿಯೋ ಕರಾವಳಿಯಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬಿಲ್ಲವ ಹುಡುಗಿಯರು ವೇಶ್ಯೆಯರಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆ ಕೂಡ ಇದೆ. ಹಿಂದುತ್ವದ ಹುಡುಗರು ಅವರನ್ನು ವೇಶ್ಯೆಯರನ್ನಾಗಿ ಮಾಡಿದ್ದಾರೆ” ಎಂದು ಫೋನ್‌ನಲ್ಲಿ ಇವರು ಮಾತನಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಈ ಹಿಂದೆ ಕೂಡ ವಿವಾದದಿಂದಾಗಿ ಸೇವೆಯಿಂದ ಅಮಾನತ್ತಾಗಿದ್ದರು. ಇದೀಗ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ತಕ್ಷಣ ಆತನನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದರು.